ನವದೆಹಲಿ :ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳಿಗೆ ನೀಡಲಾಗಿರುವ ಹಿಂದಿ ಹೆಸರುಗಳು ಅಸಾಂವಿಧಾನಿಕವಲ್ಲ ಎಂದು ಎತ್ತಿ ಹಿಡಿದಿರುವ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು, ಈ ಕ್ರಮದ ವಿರುದ್ಧ ಕೆಲವು ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಮಾಡಿರುವ ಟೀಕೆಗಳನ್ನು ತಳ್ಳಿಹಾಕಿದೆ.
0
samarasasudhi
ನವೆಂಬರ್ 23, 2023
ನವದೆಹಲಿ :ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳಿಗೆ ನೀಡಲಾಗಿರುವ ಹಿಂದಿ ಹೆಸರುಗಳು ಅಸಾಂವಿಧಾನಿಕವಲ್ಲ ಎಂದು ಎತ್ತಿ ಹಿಡಿದಿರುವ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು, ಈ ಕ್ರಮದ ವಿರುದ್ಧ ಕೆಲವು ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಮಾಡಿರುವ ಟೀಕೆಗಳನ್ನು ತಳ್ಳಿಹಾಕಿದೆ.
ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ, ಕಾಯ್ದೆಗಳು, ಮಸೂದೆಗಳು ಮತ್ತು ಇತರ ಕಾನೂನು ದಾಖಲೆಗಳಲ್ಲಿ ಬಳಸಬೇಕಾದ ಭಾಷೆಯು ಇಂಗ್ಲಿಷ್ ಆಗಿರಬೇಕು ಎಂದು ಹೇಳಿರುವ ಸಂವಿಧಾನದ ವಿಧಿ 348ರಲ್ಲಿಯ ಪದಗಳನ್ನು ಬಿಜೆಪಿ ಸಂಸದ ಬೃಜಲಾಲ್ ನೇತೃತ್ವದ ಸಮಿತಿಯು ಗಮನಕ್ಕೆ ತೆಗೆದುಕೊಂಡಿದೆ.
ಸಂಹಿತೆಯ ಪಠ್ಯವು ಇಂಗ್ಲಿಷ್ ಭಾಷೆಯಲ್ಲಿರುವುದರಿಂದ ಅದು ಸಂವಿಧಾನದ ವಿಧಿ 348ನ್ನು ಉಲ್ಲಂಘಿಸಿಲ್ಲ ಎನ್ನುವುದು ವೇದ್ಯವಾಗಿದೆ. ಗೃಹ ಸಚಿವಾಲಯದ ಉತ್ತರವು ತೃಪ್ತಿಕರವಾಗಿದೆ. ಪ್ರಸ್ತಾವಿತ ಕಾನೂನಿಗೆ ನೀಡಲಾಗಿರುವ ಹೆಸರು ಸಂವಿಧಾನದ ವಿಧಿ 348ನ್ನು ಉಲ್ಲಂಘಿಸಿಲ್ಲ ಎಂದು ಸಮಿತಿಯು ರಾಜ್ಯಸಭೆಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ಹೇಳಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್-2023),ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್-2023) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ02023)ವನ್ನು ಆ.11ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
ಪ್ರಸ್ತಾವಿತ ಕಾನೂನುಗಳು ಅನುಕ್ರಮವಾಗಿ 1860ರ ಭಾರತೀಯ ದಂಡ ಸಂಹಿತೆ,1898ರ ಅಪರಾಧ ಪ್ರಕ್ರಿಯಾ ಕಾಯ್ದೆ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಬರಲಿವೆ.
ಕೇಂದ್ರ ಸರಕಾರವು ಮಸೂದೆಗಳಿಗೆ ಹಿಂದಿ ಹೆಸರುಗಳನ್ನು ನೀಡಿರುವುದರ ಹಿಂದಿನ ತಾರ್ಕಿಕತೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನಿಸಿದ್ದರು.