ಬೆಂಗಳೂರು: ಕಪೋಲಕಲ್ಪಿತ ಸುಳ್ಳು ಇತಿಹಾಸ ಸೃಷ್ಟಿಸಿ ವಿಕೃತಗೊಳಿಸಲ್ಪಟ್ಟ ಚರಿತ್ರೆ ದೀರ್ಘಕಾಲ ಬಾಳ್ವಿಕೆ ಬಾರದು. ನಿಜ ಚರಿತ್ರೆ ಎಂದೂ ಭೂಗರ್ಭದಲ್ಲಿ ಅವಿತಿರಲಾರದು. ಅದು ಹೊರಬರಲೇ ಬೇಕು ಎಂದು ಖ್ಯಾತ ರಂಗತಜ್ಞ, ನಿರ್ದೇಶಕ, ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಶನಿವಾರ ಬೆಳಿಗ್ಗೆ ಆಯೋಜಿಸಲಾದ ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿ ಅವರು ಮಾತನಾಡಿದರು.
ಭಾತದಲ್ಲಿ ಕಮ್ಯುನಿಸ್ಟ್ ಪ್ರೇರಿತ ಸಮಾಜವಾದ ಬೌದ್ಧಿಕ ಹಿನ್ನಡೆಗೆ ಕಾರಣವಾಯಿತು. ವಿದೇಶಿ ರಂಗಭೂಮಿಯನ್ನೇ ಭಾರತೀಯ ಪರಿಕಲ್ಪನೆಗೆ ಥಳುಹಾಕಿ ಇಲ್ಲಿಯ ಮೂಲ ರಂಗಭೂಮಿಯನ್ನು ಹೊಸಕಿ ಹಾಕಿದ್ದು ನಮ್ಮ ದೌರ್ಬಲ್ಯದ ಸೂಚಕವಾಗಿದೆ. ನಮ್ಮ ಪುರಾಟ ಪಾತ್ರಗಳನ್ನು ಇತಿಹಾಸವಾಗಿ ತಿರುಚಿ, ಪಾತ್ರಗಳನ್ನು ಅಪಸವ್ಯವಾಗಿ ತೋರ್ಪಡಿಸಿ ಭಿನ್ನತೆಗೆ ಕಾರಣರಾದ ಕುತ್ಸಿತ ಮನೋಸ್ಥಿಯನ್ನು ಇನ್ನಾದರೂ ಅರ್ಥೈಸಬೇಕು ಎಂದವರು ಈ ಸಂದರ್ಭ ಕರೆನೀಡಿದರು. ಗುಬ್ಬಿ ವೀರಣ್ಣ, ಮೈಸೂರು ವರದಾಚಾರ್, ನಾಗರತ್ನಮ್ಮ ಮೊದಲಾದವರಿಂದ ಬೆಳೆದುಬಂದ ಟೆಂಟ್ ನಾಟಕ ಕಂಪೆನಿಗಳ ನಾಟಕಗಳಿಂದ ರಾಷ್ಟ್ರೀಯತೆಗೆ ಕುತ್ತುಬಂದಿರಲಿಲ್ಲ. ಟಿ.ಪಿ.ಕೈಲಾಸಂ, ಬಿ.ವಿ. ಕಾರಂತ ಮೊದಲಾದವರು ಭಾರತೀಯ ರಾಷ್ಟ್ರೀಯತೆಗೆ ಬೆಂಬಲವಾಗಿ ರಂಗಭೂಮಿಗೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಎಡ ಹಿತಾಸಕ್ತಿಯ ಕಾಕದೃಷ್ಟಿಯ ಕಾರಣ ತಿರುಚಲ್ಪಟ್ಟ ಮನೋಭೂಮಿಕೆ ವಿಜ್ರಂಭಿಸಿತು. ಇನ್ನಾದರೂ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಂಡು ನೈಜ ಇತಿಹಾಸ,ಪರಂಪರೆಯನ್ನು ಭೌದ್ದಿಕವಾಗಿ ಬೆಳೆಸಬೇಕೆಂದು ಅವರು ತಿಳಿಸಿದರು. ರಾಷ್ಟ್ರೋತ್ಥಾನ ಪರಿಷತ್ತು ಈ ನಿಟ್ಟಿನಲ್ಲಿ ಪುಸ್ತಕೋತ್ಸವವನ್ನು ಹಿನ್ನೆಲೆಯಾಗಿಟ್ಟು ಬಿಟ್ಟಿರುವಲ್ಲಿ ಹೊಸ ಸಮಾಜ ಕಟ್ಟುವ, ಕೆರಳಿರುವಲ್ಲಿ ಅರಳಿಸುವ ಕೈಂಕರ್ಯದಲ್ಲಿ ತೊಡಗಿಕೊಂಡಿರುವುದು ಕ್ರಾಂತಿ ಎಂದವರು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ತು ಸಾಹಿತ್ಯ ವಿಭಾಗದ ಸಂಚಾಲಕರಾದ ವಿಘ್ನೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಹಿರಿಯ ಬರಹಗಾರ, ವಾಯ್ಸ್ ಆಫ್ ಇಂಡಿಯಾದ ಕನ್ನಡ ವಿಭಾಗದ ಸಂಪಾದಕ ಮಂಜುನಾಥ ಅಜ್ಜಂಪುರ ನೆನಪಿನ ಕಾಣಿಕೆಗಳನ್ನು ನೀಡಿದರು. ಶ್ರೀಮತಿ.ರಶ್ಮಿ ನಿರೂಪಿಸಿದರು.

