ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯ ಪ್ರಧಾನ ಪಟ್ಟಣವಾದ ಸೀತಾಂಗೋಳಿಯಲ್ಲಿ ಹಲವಾರು ವರ್ಷಗಳಿಂದ ಜನರ ಬೇಡಿಕೆಯಾಗಿದ್ದ ಶೌಚಾಲಯವನ್ನು ಶುಚಿತ್ವ ಮಿಷನ್ (ಸ್ವಚ್ಛ ಭಾರತ್) ಯೋಜನೆ ಮುಖಾಂತರ ಅನುದಾನ ಮಂಜೂರುಗೊಳಿಸಿ ವರ್ಷಗಳು ಮೂರು ಕಳೆದರೂ ಇದುವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ತೆರೆದು ಕೊಡದಿರುವುದರಲ್ಲಿ ವಾರ್ಡ್ ಜನಪ್ರತಿನಿಧಿ ಕಾವ್ಯಶ್ರೀ ಅತೃಪ್ತಿ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳಿಗೆ ಮನವಿ ನೀಡಿದ್ದರು.
ಆದರೆ ಇದುವರೆಗೆ ಆ ಕಟ್ಟಡಕ್ಕೆ ನೀರು ಹಾಗು ವಿದ್ಯುತ್ತಿನ ಸಂಪರ್ಕವನ್ನು ನೀಡಲಾಗಿಲ್ಲ; ಇದೆಲ್ಲವನ್ನು ಗಮನಿಸಬೇಕಾದ ಪುತ್ತಿಗೆ ಪಂಚಾಯತಿ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರೆ ಎಂದು ಸೀತಾಂಗೋಳಿ ವಾರ್ಡಿನ ಸದಸ್ಯೆ ಕಾವ್ಯಶ್ರೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು, ಕುಂಬಳೆ, ಬದಿಯಡ್ಕ, ಪೆರ್ಲ ಭಾಗಗಳಿಗೆ ತೆರಳುವಾಗ ಪ್ರಧಾನ ಕೇಂದ್ರವಾಗಿ ಜನನಿಬಿಡ ಪ್ರದೇಶವಾದ ಸೀತಾಂಗೋಳಿ ಅತಿಹೆಚ್ಚಿನ ಸಂಖ್ಯೆಯ ಜನರು ಸಂಚರಿಸುವ ಪ್ರದೇಶವಾಗಿದೆ. ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಜನಸಾಮಾನ್ಯರನ್ನು ಪ್ರತ್ಯೇಕವಾಗಿ ಮಹಿಳೆಯರನ್ನು ಪರದಾಡುವಂತೆ ಮಾಡಿದೆ. ಈ ಬಗ್ಗೆ ವಿವರವಾಗಿ ಪಂಚಾಯತಿ ಅಧಿಕಾರಿಗಳಲ್ಲಿ ದೂರು ನೀಡಿದ್ದರೂ ತಮ್ಮ ಕಣ್ಣ ಮುಂದೆ ಕಟ್ಟಡವೊಂದು ನಿರ್ಮಾಣಗೊಂಡು ವರ್ಷ ಎರಡು ಕಳೆದರೂ ಅದಕ್ಕೆ ಬೇಕಾದ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಯಾವ ರಾಜಕೀಯ ಮೇಲಾಧಿಕಾರಿಯ ಆಜ್ಞೆಗೆ ಕಾಯುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಮುಂದಿನ ಒಂದು ವಾರದೊಳಗೆ ಸಮರ್ಪಕ ವ್ಯವಸ್ಥೆಯನ್ನು ಮಾಡದಿದ್ದರೆ ಸೀತಾಂಗೋಳಿ ಪ್ರದೇಶದ ಜನಸಾಮಾನ್ಯರು,ವ್ಯಾಪಾರಿಗಳನ್ನು ಒಳಗೊಳ್ಳಿಸಿ ಪಂಚಾಯತಿ ಕಛೇರಿ ದಿಗ್ಬಂದನ ನಡೆಸಲು ಸಿದ್ದತೆ ನಡೆಸುವುದಾಗಿ ಈ ಸಂದರ್ಭ ಕಾವ್ಯಶ್ರೀ ತಿಳಿಸಿದರು.

.jpg)
.jpg)
