ನವದೆಹಲಿ: ಹೆಸರಾಂತ ಬ್ರಾಂಡ್‌ಗಳ ಹೆಸರಿನಲ್ಲಿ ದ್ವಾರಕಾದಲ್ಲಿ ನಕಲಿ ತುಪ್ಪ ತಯಾರಿಸಿ, ಮಾರಾಟ ಮಾಡುತ್ತಿದ್ದ ಕಾರ್ಖಾನೆ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
0
samarasasudhi
ನವೆಂಬರ್ 24, 2023
ನವದೆಹಲಿ: ಹೆಸರಾಂತ ಬ್ರಾಂಡ್‌ಗಳ ಹೆಸರಿನಲ್ಲಿ ದ್ವಾರಕಾದಲ್ಲಿ ನಕಲಿ ತುಪ್ಪ ತಯಾರಿಸಿ, ಮಾರಾಟ ಮಾಡುತ್ತಿದ್ದ ಕಾರ್ಖಾನೆ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನಗರದ ದಿಚೌನ್ ಕಲಾನ್‌ನಲ್ಲಿರುವ ಕಾರ್ಖಾನೆ ಮೇಲೆ ದ್ವಾರಕಾ ಜಿಲ್ಲಾ ಪೊಲೀಸ್ ತನಿಖಾ ತಂಡ ಹಾಗೂ ಜಾಗೃತ ದಳಗಳು ಜಂಟಿಯಾಗಿ ನವೆಂಬರ್ 19ರಂದು ದಾಳಿ ನಡೆಸಿದ್ದವು ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ದ್ವಾರಕಾ) ಎಂ. ಹರ್ಷವರ್ಧನ್ ಹೇಳಿದ್ದಾರೆ.
'ನಕಲಿ ತುಪ್ಪ ತಯಾರಿಕೆಗೆ ಬಳಸುವ ವಿವಿಧ ಉತ್ಪನ್ನಗಳು ದಾಳಿ ವೇಳೆ ಸಿಕ್ಕಿವೆ. ಆ ಸಂದರ್ಭದಲ್ಲಿ ಇಬ್ಬರು ಸ್ಥಳದಲ್ಲಿದ್ದರು. ಕಾರ್ಖಾನೆ ನಡೆಸಲು ಬೇಕಾದ ಸೂಕ್ತ ದಾಖಲೆಗಳನ್ನು ಅವರು ನೀಡಲಿಲ್ಲ. ಕಾರ್ಖಾನೆಗೆ ಬೀಗ ಜಡಿಯಲಾಗಿದೆ' ಎಂದಿದ್ದಾರೆ.
'ಸುಮಿತ್ ಎಂಬಾತ ಕಾರ್ಖಾನೆ ಮಾಲೀಕ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಆತನ ವಿರುದ್ಧ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ' ಎಂದೂ ಹೇಳಿದ್ದಾರೆ.
ಪತಂಜಲಿ, ಮದರ್ ಡೈರಿ, ಅಮುಲ್ ಮತ್ತು ನಕ್ಷಾ ಡೈರಿ ಹೆಸರಿನ ಸಾವಿರಾರು ಸ್ಟಿಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
'ವಿವಿಧ ಬ್ರಾಂಡ್‌ಗಳ 4,900 ಸ್ಟಿಕ್ಕರ್‌ಗಳು, ಗ್ಯಾಸ್ ಬರ್ನರ್‌ಗಳು, ವನಸ್ಪತಿ, ಕಂಟೈನರ್ ಹಾಗೂ ನಕಲಿ ತುಪ್ಪ ತಯಾರಿಗೆ ಬಳಸುವ ಇನ್ನಷ್ಟು ಪದಾರ್ಥಗಳನ್ನು ವಶಕ್ಕೆ ಪಡೆದಿದ್ದೇವೆ' ಎಂದು ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.