ರಾಯಪುರ: ಛತ್ತೀಸಗಢ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಜಾತಿಗಣತಿ ನಡೆಸುವ, ರೈತರ ಸಾಲ ಮನ್ನಾ ಮಾಡುವ, ಕ್ವಿಂಟಲ್ ಭತ್ತವನ್ನು ₹3,200ಕ್ಕೆ ಖರೀದಿಸುವ ಮತ್ತು ಅಡುಗೆ ಅನಿಲ ಸಿಲಿಂಡರ್‌ಗೆ ಸಬ್ಸಿಡಿ ನೀಡುವ ಭರವಸೆ ಇತ್ತಿದೆ.
0
samarasasudhi
ನವೆಂಬರ್ 06, 2023
ರಾಯಪುರ: ಛತ್ತೀಸಗಢ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಜಾತಿಗಣತಿ ನಡೆಸುವ, ರೈತರ ಸಾಲ ಮನ್ನಾ ಮಾಡುವ, ಕ್ವಿಂಟಲ್ ಭತ್ತವನ್ನು ₹3,200ಕ್ಕೆ ಖರೀದಿಸುವ ಮತ್ತು ಅಡುಗೆ ಅನಿಲ ಸಿಲಿಂಡರ್‌ಗೆ ಸಬ್ಸಿಡಿ ನೀಡುವ ಭರವಸೆ ಇತ್ತಿದೆ.
ಮೊದಲ ಹಂತದ ಮತದಾನ ನಡೆಯುವ ಎರಡು ದಿನಗಳ ಮೊದಲು ರಾಯಪುರ, ರಾಜನಂದಗಾಂವ್, ಜಗದಾಲಪುರ, ಬಿಲಾಸಪುರ, ಅಂಬಿಕಾಪುರ ಮತ್ತು ಕವರ್ಧಾದಲ್ಲಿ 'ಭರವಸೆಯ ಘೋಷಣಾ ಪತ್ರ 2023-28' ಶೀರ್ಷಿಕೆಯ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ರಾಜನಂದಗಾಂವ್‌ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪಕ್ಷದ ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಅವರು ರಾಜಧಾನಿ ರಾಯಪುರದಲ್ಲಿ ಅನಾವರಣಗೊಳಿಸಿದರು.
ರೈತರ ಸಾಲ ಮನ್ನಾ, ಜಾತಿಗಣತಿ, ಎಕರೆಗೆ 20 ಕ್ವಿಂಟಲ್ ಭತ್ತ ಖರೀದಿ, ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಚಾರದ ವೇಳೆ ನೀಡಿದ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಬಘೆಲ್ ಅವರು ಮಾತನಾಡಿ, 'ಭತ್ತ ಬೆಳೆಗಾರರಿಗೆ ಪ್ರಸ್ತುತ ರಾಜೀವ್ ಗಾಂಧಿ ನ್ಯಾಯ್ ಯೋಜನೆಯ ಅಡಿ ನೀಡಲಾಗುತ್ತಿರುವ ಇನ್‌ಪುಟ್ ಸಬ್ಸಿಡಿ ಸೇರಿದಂತೆ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹3,200 ನೀಡಲಾಗುವುದು. ತೆಂಡು ಎಲೆ ಸಂಗ್ರಹಿಸುವವರಿಗೆ ವಾರ್ಷಿಕ ₹4,000 ಬೋನಸ್ ನೀಡಲಾಗುವುದು' ಎಂದು ಅವರು ಹೇಳಿದರು.
'ತಾಯಂದಿರು ಮತ್ತು ಸಹೋದರಿಯರಿಗೆ ಮಹತಾರಿ ನ್ಯಾಯ್ ಯೋಜನೆ ಪ್ರಾರಂಭಿಸಲಾಗುವುದು. ಇದರ ಅಡಿ ಎಲ್ಲಾ ಆದಾಯ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ ₹500 ಸಬ್ಸಿಡಿ ನೀಡಲಾಗುವುದು. ಸಬ್ಸಿಡಿ ಮೊತ್ತವನ್ನು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು' ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು ಮುಂದುವರಿಯುತ್ತವೆ ಎಂದರು. 90 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.