ಕಾಸರಗೋಡು: 'ಗಾಜಾ ಪಟ್ಟಿಯಲ್ಲಿ ಯುದ್ಧದ ಮೂಲಕ ಪ್ಯಾಲೆಸ್ಟೀನ್‍ನ ಸಾವಿರಾರು ನಾಗರಿಕರನ್ನು ಕೊಲೆಗೈದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧಾಪರಾಧಿಯಾಗಿದ್ದಾರೆ. ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ ಗುಂಡಿಟ್ಟು ಹತ್ಯೆ ಮಾಡಬೇಕಿದೆ' ಎಂದು ಕಾಂಗ್ರೆಸ್‍ನ ಹಿರಿಯ ನಾಯಕ, ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
ಸಂಸದರ ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಇದು ಸಂಸದರೊಬ್ಬರು ಆಡಬಾರದ ಖಂಡನೀಯ ಹೇಳಿಕೆ ಎಂದಿದೆ.
ಪ್ಯಾಲೆಸ್ಟೀನ್ ಪರವಾಗಿ ಇತ್ತೀಚೆಗೆ ಯುನೈಟೆಡ್ ಮುಸ್ಲಿಂ ಜಮಾ-ಅತ್ ಹಮ್ಮಿಕೊಂಡಿದ್ದ ಬೆಂಬಲ ಪ್ರದರ್ಶನ ಕಾರ್ಯಕ್ರಮದಲ್ಲಿ ಉಣ್ಣಿತ್ತಾನ್ ಮಾಡಿರುವ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜಿನೀವಾ ಸಮಾವೇಶದ ಒಪ್ಪಂದವನ್ನು ನೆತನ್ಯಾಹು ಉಲ್ಲಂಘಿಸಿದ್ದಾರೆ. ಆ ಮೂಲಕ ಜಗತ್ತಿನ ಮುಂದೆ ಯುದ್ಧಾಪರಾಧಿಯಾಗಿ ನಿಂತಿದ್ದಾರೆ. ಅವರು ಎಸಗಿರುವ ಕೃತ್ಯ ಪರಿಗಣಿಸಿ ಅವರನ್ನು ಹತ್ಯೆ ಮಾಡಬೇಕಿದೆ ಎಂದು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಎರಡನೇ ಮಹಾಯುದ್ಧದ ನಂತರ ಜರ್ಮನಿಯ ನ್ಯೂರೆಂಬರ್ಗ್ ಯುದ್ದಾಪರಾಧಿಗಳ ವಿಚಾರಣೆಯ ಸ್ಥಳವಾಗಿತ್ತು. ಆದರೆ, ಅಲ್ಲಿ ಯುದ್ದಾಪರಾಧಿಗಳನ್ನು ಯಾವುದೇ ವಿಚಾರಣೆಗೆ ಒಳಪಡಿಸದೆ ಗುಂಡಿಟ್ಟು ಹತ್ಯೆ ಮಾಡಲಾಗುತ್ತಿತ್ತು. ಈಗ ಅಂತಹ ನ್ಯೂರೆಂಬರ್ಗ್ ವಿಚಾರಣೆಯ ಅಗತ್ಯವಿದೆ ಎಂದು ಉಣ್ಣಿತ್ತಾನ್ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು, ಸಂಸದರ ಮಾತಿನ ಹಿಂದೆ ಭಯೋತ್ಪಾದಕರ ಪರ ಪ್ರಚಾರ ಮಾಡುವ ಉದ್ದೇಶ ಅಡಗಿದೆ. ಹಾಗಾಗಿ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದು 'ಎಕ್ಸ್'ನಲ್ಲಿ(ಟ್ವಿಟ್ಟರ್) ಆಗ್ರಹಿಸಿದ್ದಾರೆ.