HEALTH TIPS

ಅಯೋಧ್ಯೆ ಮಂದಿರ: ರಾಮಲಲ್ಲಾ ಮೂರ್ತಿಗಳ ಕೆತ್ತನೆ ಕಾರ್ಯ ಪೂರ್ಣ; ಜನವರಿ 22ಕ್ಕೆ ಪ್ರತಿಷ್ಠಾಪನೆ!

     ಲಖನೌ: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿದ್ದು, 2024ರ ಜನವರಿ 22 ರಂದು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಮೂವರು ಶಿಲ್ಪಿಗಳು ಮೂರು ಮೂರ್ತಿಗಳ ಕೆತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ಪೈಕಿ ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 

      ರಾಜಸ್ಥಾನದ ಮಕ್ರಾನಾದ ಬಿಳಿ ಅಮೃತಶಿಲೆಯಲ್ಲಿ ಒಂದು ಮೂರ್ತಿಯನ್ನು ಕೆತ್ತಲಾಗಿದ್ದು, ಇನ್ನೆರಡು ಮೂರ್ತಿಗಳಿಗೆ ಕರ್ನಾಟಕದಿಂದ ಪಡೆದ ಕಲ್ಲುಗಳಲ್ಲಿ ಅಂತಿಮ ರೂಪ ನೀಡಲಾಗಿದೆ. ವಾಸ್ತವವಾಗಿ, ಈ ಎಲ್ಲಾ ಮೂರ್ತಿಗಳನ್ನು ಸಾರ್ವಜನಿಕರ ಕಣ್ತಪ್ಪಿಸಿ ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ಕೆತ್ತಲಾಗಿದೆ.

       ಕರ್ನಾಟಕದ ಶಿಲ್ಪಿಗಳಾದ ಗಣೇಶ್ ಭಟ್ ಮತ್ತು ಅರುಣ್ ಯೋಗಿರಾಜ್ ಅವರು ಶ್ಯಾಮ್ ಶಿಲಾ ಅಥವಾ ಕೃಷ್ಣ ಶಿಲಾ ಎಂದು ಹೆಸರಾಗಿರುವ ನೆಲ್ಲಿಕಾರು ಬಂಡೆ (ಕಪ್ಪು ಕಲ್ಲುಗಳು) ಮತ್ತು ಮೈಸೂರಿನ ಮತ್ತೊಂದು ಬಂಡೆಯಿಂದ ಕೆತ್ತಿದ್ದಾರೆ. ಮೂರನೇ ವಿಗ್ರಹವನ್ನು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರು ಬಿಳಿ ಮಕ್ರಾನಾ ಮಾರ್ಬಲ್ ಕಲ್ಲಿನಲ್ಲಿ ಕೆತ್ತಿದ್ದಾರೆ. ಮೂವರು ಶಿಲ್ಪಿಗಳು ಪರಸ್ಪರರ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ವಿವಿಧ ಸ್ಥಳಗಳಲ್ಲಿ ಮೂರ್ತಿ ಕೆತ್ತನೆ ಮಾಡಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೂಲಗಳು ಹೇಳಿವೆ.

      ಮೂವರೂ ಶಿಲ್ಪಿಗಳು ಮೂರ್ತಿ ಕೆತ್ತನೆ ಕೆಲಸ ಪೂರ್ಣಗೊಂಡ ಬಗ್ಗೆ ದೇವಾಲಯದ ಟ್ರಸ್ಟ್‌ಗೆ ತಿಳಿಸಿದ್ದಾರೆ. ಈಗ ಸಾರ್ವಜನಿಕರ ದರ್ಶನಕ್ಕಾಗಿ ಯಾವಾಗ ಪ್ರತಿಷ್ಠಾಪಿಸಲಾಗುತ್ತದೆ ಎಂಬುದನ್ನು ಟ್ರಸ್ಟ್ ನಿರ್ಧರಿಸುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಟ್ರಸ್ಟ್ ನ ಸದಸ್ಯರೊಬ್ಬರು ತಿಳಿಸಿದರು. ಮುಂದಿನ ಕೆಲವು ದಿನಗಳಲ್ಲಿ, ರಾಮ್ ಲಲ್ಲಾನ (ರಾಮನ ಮಗುವಿನ ರೂಪ) ಎಲ್ಲಾ ಮೂರು ವಿಗ್ರಹಗಳಲ್ಲಿ ಒಂದನ್ನು 'ರಾಮನಂದಿ ಸಂಪ್ರದಾಯದ ಪ್ರಮುಖ ಸ್ವಾಮೀಜಿಗಳನ್ನೊಳಗೊಂಡ ಐವರು ಸದಸ್ಯರ ಸಮಿತಿ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡುತ್ತದೆ.

    ಪ್ರತಿಷ್ಠಾಪನೆಗೆ ಆಯ್ಕೆಯಾದ ವಿಗ್ರಹವನ್ನು ಜನವರಿ 21 ರಂದು ನಡೆಯುವ ನಾಗರಬ್ರಹ್ಮಣ (ಪಟ್ಟಣ ಪ್ರವಾಸ) ಸಮಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಕಣ್ಣಿಗೆ ತರಲಾಗುವುದು ದೇವಸ್ಥಾನದ ಟ್ರಸ್ಟ್ ಮೂಲಗಳು ಹೇಳಿವೆ. ವಿಗ್ರಹವನ್ನು ರಥದ ಮೇಲೆ ಇರಿಸಲಾಗುತ್ತದೆ ಮತ್ತು ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ದೇವಾಲಯದ ಪಟ್ಟಣದ ಸುತ್ತಲೂ ಕೊಂಡೊಯ್ಯಲಾಗುತ್ತದೆ.

       ಈ ಮಧ್ಯೆ ಜನವರಿ 22 ರಂದು ನಡೆಯುವ ಪ್ರತಿಷ್ಠಪಾನೆಯ ನಂತರ 48 ದಿನಗಳ ಕಾಲ ಶೆಹನಾಯಿ, ತಬಲಾ, ಸಿತಾರ್ ಮತ್ತು ಪಖಾವಾಜ್ ಮೂಲಕ ಭಜನೆಗಳ ಮಾಧುರ್ಯವು ರಾಮಮಂದಿರದಲ್ಲಿ ಅನುರಣಿಸುತ್ತದೆ. ದೇಶಾದ್ಯಂತ ಕಲಾವಿದರು ದೇವರಿಗೆ ಸಂಗೀತ ನಮನ ಸಲ್ಲಿಸುವಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿರುವ ಐದು ಮಂಟಪಗಳಲ್ಲಿ ಒಂದಾದ ನೃತ್ಯ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.

        ಇದಲ್ಲದೆ, ಪ್ರತಿಷ್ಠಾಪನೆ ನಂತರದ 48 ದಿನ, ದೇಶದಾದ್ಯಂತದ ಪ್ರಮುಖ ಯಾತ್ರಾಸ್ಥಳಗಳಿಂದ ತಂದ 1,000 ಕಲಶಗಳ ನೀರಿನಿಂದ ರಾಮಲಾಲಾ ವಿಗ್ರಹಕ್ಕೆ ಅಭಿಷೇಕ ಮಾಡಲಾಗುವುದು. ಇದಲ್ಲದೆ, ಪೂಜೆಯ ಭಾಗವಾಗಿ ದೇವರಿಗೆ ಕುಂಕುಮ, ಕರ್ಪೂರ ಮತ್ತು ಇತರ ಸಾಮಾಗ್ರಿಗಳನ್ನು ಅರ್ಪಿಸಲಾಗುತ್ತದೆ. ಪ್ರತಿಷ್ಠಾಪನೆ ನಂತರದ ಎಲ್ಲಾ ಪೂಜೆಗಳನ್ನು ಕರ್ನಾಟಕದ ಉಡುಪಿ ಪೇಜಾವರ ಮಠದ ಸ್ವಾಮಿಗಳು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries