HEALTH TIPS

ಭಾರತದ ಇಂಗಾಲ ಹೊರಸೂಸುವಿಕೆ ಇಳಿಕೆ: ಭೂಪೇಂದ್ರ ಯಾದವ್‌

             ದುಬೈ: ಹವಾಮಾನ ಕ್ರಿಯಾಯೋಜನೆಗೆ ಸಮಾನತೆ ಮತ್ತು ಹವಾಮಾನ ನ್ಯಾಯ (ಹವಾಮಾನ ಬದಲಾವಣೆ ತಡೆಗೆ ನ್ಯಾಯಸಮ್ಮತ ಹೊಣೆಗಾರಿಗೆ) ಆಧಾರವಾಗಿರಬೇಕು ಎಂದು ಭಾರತ ದೃಢವಾಗಿ ನಂಬಿದೆ. ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ನಾಯಕತ್ವವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವಹಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗಲಿದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್‌ ಅವರು 'ಸಿಒಪಿ28'ರಲ್ಲಿ (ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶ)' ಶನಿವಾರ ಹೇಳಿದರು.

             ದುಬೈನಲ್ಲಿ ನಡೆಯುತ್ತಿರುವ 'ಸಿಒಪಿ28'ನ ವಾರ್ಷಿಕ ಸಮಾವೇಶದ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ನಿಲುವನ್ನು ತಿಳಿಸಿದ ಯಾದವ್‌, 'ಹವಾಮಾನ ಬದಲಾವಣೆ ತಡೆ ನಿಟ್ಟಿನಲ್ಲಿ ಭಾರತದ ಸಾಧನೆಗಳನ್ನು ವಿವರಿಸಿದರು. 2005ರಿಂದ 2019ರ ನಡುವಿನ ಅವಧಿಯಲ್ಲಿ ಭಾರತ ತನ್ನ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇ 33ಕ್ಕೆ ಇಳಿಸಿದೆ. ತಾನು ಹಾಕಿಕೊಂಡಿದ್ದ ಗುರಿಯನ್ನು ಕೇವಲ 11 ವರ್ಷಗಳಲ್ಲಿಯೇ ಸಾಧಿಸಿದೆ' ಎಂದು ಅವರು ತಿಳಿಸಿದರು.

              'ವಿಸ್ತೃತ ಹವಾಮಾನ ಕ್ರಿಯಾಯೋಜನೆಯನ್ನು ನಿರ್ಧರಿಸುವುದಕ್ಕಾಗಿ ಆರ್ಥಪೂರ್ಣ, ಉಪಯುಕ್ತ ಸಲಹೆಗಳನ್ನು ನೀಡಲು ಭಾರತವು 'ಗ್ಲೋಬಲ್‌ ಸ್ಟಾಕ್‌ಟೇಕ್‌ (ಜಿಎಸ್‌ಟಿ)'ಅನ್ನು ಎದುರು ನೋಡುತ್ತಿದೆ' ಎಂದರು.

               ಜಿಎಸ್‌ಟಿ ಎಂಬುದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್‌ ಒಪ್ಪಂದದ ಗುರಿಗಳನ್ನು ಸಾಧಿಸಲು ಮತ್ತು ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸುವ ವಿಶ್ವ ಸಮುದಾಯದ ಸಾಮೂಹಿಕ ಪ್ರಯತ್ನದ ಎರಡು ವರ್ಷಗಳ ನಡುವಿನ ವಿಶ್ಲೇಷಣೆಯಾಗಿದೆ.

ಪ್ರಸ್ತುತ ನಡೆಯುತ್ತಿರುವ ಹವಾಮಾನದ ಕುರಿತ ಚರ್ಚೆಗಳನ್ನು 'ಸಿಒಪಿ28 ಕ್ರಿಯಾಯೋಜನೆ' ಎಂದು ಸಚಿವ ಯಾದವ್‌ ಬಣ್ಣಿಸಿದರು. ಸಿಒಪಿ28ರ ಉದ್ದೇಶಗಳು ಸಮಾವೇಶದ ಮೊದಲ ದಿನದಿಂದಲೇ ಸ್ಪಷ್ಟವಾಗುತ್ತಾ ಬಂದಿದೆ ಎಂದೂ ಪ್ರಶಂಸಿಸಿದರು.

                 ಒಂದೇ ತಕ್ಕಡಿಗೆ ಹಾಕಬೇಡಿ: ಚೀನಾ ಮತ್ತು ಅಮೆರಿಕದಂತಹ ಅಧಿಕ ಇಂಗಾಲ ಹೊರಸೂಸುವ ದೇಶಗಳೊಂದಿಗೆ, ತಲಾವಾರು ಕಡಿಮೆ ಇಂಗಾಲ ಹೊರಸೂಸುವಿಕೆ ಹೊಂದಿರುವ ಭಾರತವನ್ನು ಒಂದೇ ತಕ್ಕಡಿಗೆ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಯೂರೋಪ್‌ ಸಂಸತ್‌ನ ಪ್ರಮುಖ ರಾಜಕೀಯ ಮುಖಂಡರು ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

             ಜರ್ಮನಿಯ ರಾಜಕೀಯ ಮುಖಂಡ, ಯೂರೋಪ್‌ ಸಂಸತ್‌ ಸದಸ್ಯ ಪೀಟರ್‌ ಲೀಸ್‌, 'ಭಾರತದ ತಲಾವಾರು ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿಮೆ ಇದೆ. ಆದರೂ, ಹವಾಮಾನ ಬದಲಾವಣೆ ಕುರಿತ ಚರ್ಚೆಗಳಲ್ಲಿ ಚೀನಾ ಮತ್ತು ಅಮೆರಿಕದಂಥ ದೇಶಗಳೊಂದಿಗೆ ಭಾರತವನ್ನು ಹೋಲಿಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ' ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

                  ಭಾರತದ ತಲಾವಾರು ಇಂಗಾಲ ಹೊರಸೂಸುವಿಕೆ ಪ್ರಮಾಣ 2 ಟನ್‌ಗಳಷ್ಟಿದೆ. ಇದು ಜಾಗತಿಕ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆ ಎಂದು ಕಳೆದ ವಾರ ಬಿಡುಗಡೆಯಾದ ವಿಶ್ವ ವಿಜ್ಞಾನಿಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

                 ಅಮೆರಿಕದ ತಲಾವಾರು ಇಂಗಾಲ ಹೊರಸೂಸುವಿಕೆ 14.9 ಟನ್‌ಗಳಾಗಿದೆ. ರಷ್ಯಾ 11.4, ಜಪಾನ್‌ 8.5, ಯೂರೋಪ್‌ ಒಕ್ಕೂಟ 6.2 ಟನ್‌ ಆಗಿದೆ. ಜಾಗತಿಕ ತಲಾವಾರು ಇಂಗಾಲ ಹೊರಸೂಸುವಿಕೆಯು 4.7 ಟನ್‌ ತಲಾವಾರು ಇಂಗಾಲ ಹೊರಸೂಸುವಿಕೆ ಪ್ರಮಾಣ ಹೊಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries