HEALTH TIPS

ಒಂದೇ ಫೋನ್‌ನಲ್ಲಿ ಎರಡು ವಾಟ್ಸ್‌ಆಯಪ್ ಖಾತೆ ಬಳಸುವುದು ಹೇಗೆ?

 ವಳಿ ಸಿಮ್ ಕಾರ್ಡ್ ಬೆಂಬಲಿಸುವ ಫೋನ್‌ಗಳ ಈ ಕಾಲದಲ್ಲಿ ಬಹುತೇಕರು ಇಂದು ಎರಡೆರಡು ಮೊಬೈಲ್ ಫೋನ್ ನಂಬರ್‌ಗಳನ್ನು (ಸಿಮ್ ಕಾರ್ಡ್) ಹೊಂದಿರುತ್ತಾರೆ. ಒಂದನ್ನು ಕಚೇರಿ ಅಥವಾ ಉದ್ಯಮಕ್ಕೆ ಸಂಬಂಧಿಸಿದಂತೆಯೂ, ಮತ್ತೊಂದನ್ನು ವೈಯಕ್ತಿಕ ಬಳಕೆಗೂ ಉಪಯೋಗಿಸುವುದು ಸಾಮಾನ್ಯ.

ಅದಕ್ಕೆ ತಕ್ಕಂತೆ ಕೆಲವರಿಗೆ ಎರಡೆರಡು ವಾಟ್ಸ್‌ಆಯಪ್ ಖಾತೆಗಳನ್ನು ತೆರೆಯುವುದು ಅನಿವಾರ್ಯ. ಎರಡನ್ನೂ ನಿಭಾಯಿಸಬೇಕಿದ್ದರೆ ಇದುವರೆಗೆ ಸಾಕಷ್ಟು ಕಸರತ್ತು ಮಾಡಬೇಕಾಗುತ್ತಿತ್ತು ಅಥವಾ ಎರಡೆರಡು ಫೋನ್‌ಗಳಲ್ಲೇ ಒಯ್ಯಬೇಕಾಗುತ್ತಿತ್ತು.

ಆದರೆ, ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ ವಾಟ್ಸ್‌ಆಯಪ್ ಸಂಸ್ಥೆಯೇ ತನ್ನ ಆಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್‌ಆಯಪ್ ಖಾತೆಗಳನ್ನು ಏಕಕಾಲದಲ್ಲಿ ನಿಭಾಯಿಸಲು ಅನುವು ಮಾಡಿಕೊಟ್ಟಿದೆ. ಅಂದರೆ ಎರಡೂ ಖಾತೆಗಳನ್ನು ಒಂದೇ ಫೋನ್‌ನಲ್ಲಿರುವ ಒಂದೇ ಆಯಪ್‌ನಿಂದ ನಿಭಾಯಿಸಬಹುದು. ಅದು ಹೇಗೆ ಮತ್ತು ಇದರ ಬದಲಾಗಿ ಇರುವ ಬೇರೆ ಆಯ್ಕೆಗಳೇನು ಎಂಬ ಮಾಹಿತಿ ಇಲ್ಲಿದೆ.

ಒಂದೇ ಆಯಪ್, ಎರಡು ಖಾತೆ: ಬಳಸುವುದು ಹೇಗೆ
ಈ ವ್ಯವಸ್ಥೆ ಈಗಾಗಲೇ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್ನಲ್ಲಿ) ಇದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಖಾತೆ ಬದಲಾಯಿಸಿಕೊಳ್ಳುವ (Switch Accounts) ಒಂದು ಬಟನ್ ಒತ್ತಿದರೆ, ಯಾವ ಖಾತೆಗೆ ಬೇಕೋ, ಅದನ್ನು ಬಳಸಬಹುದು.

* ವಾಟ್ಸ್‌ಆಯಪ್ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಿರುವಂತೆ ನೋಡಿಕೊಳ್ಳಿ
* ಫೋನ್‌ನಲ್ಲಿ ವಾಟ್ಸ್‌ಆಯಪ್ ತೆರೆಯಿರಿ
* ಬಲ ಮೇಲ್ಭಾಗದಲ್ಲಿ ಮೂರು ಲಂಬ ಚುಕ್ಕಿಗಳಿರುವಲ್ಲಿ ಒತ್ತಿ ಸೆಟ್ಟಿಂಗ್ಸ್ ತೆರೆಯಿರಿ
* ಸ್ವಲ್ಪ ಕೆಳಗೆ ನೋಡಿದಾಗ ಕಾಣಿಸುವ 'ಅಕೌಂಟ್ಸ್' ಒತ್ತಿ
* 'Add Account' ಕ್ಲಿಕ್ ಮಾಡಿ, ಮುಂದಿನ ಬಟನ್‌ನಲ್ಲಿ ಅನುಮತಿ ನೀಡಿ.
* ನಂತರ ನಿಮ್ಮ ಫೋನ್ ನಂಬರ್ ನಮೂದಿಸಿ, 'ನೆಕ್ಸ್ಟ್' ಒತ್ತಿ
* ಸ್ಕ್ರೀನ್ ಮೇಲೆ ಮುಂದಿನ ಸೂಚನೆಗಳನ್ನು ಅನುಸರಿಸಿ

ಬೇರೊಂದು ಖಾತೆಯ ಸಂದೇಶಗಳನ್ನು ನೋಡುವುದು ಹೇಗೆ?
ಸಂದೇಶ ಬಂದಾಗ ಯಾವ ಸಂಖ್ಯೆಗೆ ಸಂದೇಶ ಬಂತು ಎಂಬುದನ್ನು ನೋಟಿಫಿಕೇಶನ್‌ನಲ್ಲೇ ಆಯಪ್ ತೋರಿಸುತ್ತದೆ. ಆದರೆ ಎರಡೂ ವಾಟ್ಸ್‌ಆಯಪ್ ಖಾತೆಗಳಿಗೆ ನೀವು ನೋಟಿಫಿಕೇಶನ್ ಧ್ವನಿಯನ್ನು ಬೇರೆ ಬೇರೆ ಹೊಂದಿಸಿಟ್ಟರೆ, ಯಾವುದರಿಂದ ಸಂದೇಶ ಬಂತು ಎಂಬುದನ್ನು ಫೋನ್ ನೋಡದೆಯೇ ತಿಳಿಯುವುದು ಸಾಧ್ಯ. ನೋಟಿಫಿಕೇಶನ್ ಸ್ಪರ್ಶಿಸಿದ ತಕ್ಷಣ ನೀವು ಆಯಾ ಖಾತೆಯ ವಾಟ್ಸ್‌ಆಯಪ್‌ಗೇ ನೇರವಾಗಿ ಹೋಗಬಹುದು. ಇಲ್ಲವೆಂದಾದರೆ, ಈಗಾಗಲೇ ತೆರೆದಿರುವ ವಾಟ್ಸ್‌ಆಯಪ್‌ನಲ್ಲಿ ಹಿಂದೆ ಹೇಳಿದಂತೆ ಸೆಟ್ಟಿಂಗ್ಸ್‌ಗೆ ಹೋದರೆ, ಅಲ್ಲೇ ಕೆಳಗೆ 'Switch Accounts' ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಬಳಸಿ ಮುಂದುವರಿಸಬಹುದು.

ಈ ರೀತಿ ಮಾಡಿದರೆ, ಕೇವಲ ವಾಟ್ಸ್‌ಆಯಪ್‌ಗಾಗಿ ಎರಡೆರಡು ಮೊಬೈಲ್ ಫೋನ್‌ಗಳನ್ನು ಒಯ್ಯುವ ಅಗತ್ಯವಿರುವುದಿಲ್ಲ.

ಕ್ಲೋನ್ ಅಥವಾ ಟ್ವಿನ್ ಆಯಪ್
ವಾಟ್ಸ್‌ಆಯಪ್ ಈ ಅವಳಿ ಖಾತೆಯ ಹೊಸ ವೈಶಿಷ್ಟ್ಯ ಪರಿಚಯಿಸುವ ಮುನ್ನವೇ ಸಾಕಷ್ಟು ಮೊಬೈಲ್ ಫೋನ್ ತಯಾರಿಕಾ ಕಂಪನಿಗಳು ಕ್ಲೋನ್, ಡುಪ್ಲಿಕೇಟ್, ಪ್ಯಾರಲಲ್ ಅಥವಾ ಟ್ವಿನ್ - ಇತ್ಯಾದಿ ಹೆಸರುಗಳಲ್ಲಿ (ಫೋನ್ ಬ್ರ್ಯಾಂಡ್‌ಗಳಲ್ಲಿ ಬೇರೆ ಬೇರೆ ಹೆಸರು) ಪ್ರಮುಖ ಸಾಮಾಜಿಕ ಜಾಲತಾಣಗಳ ಮತ್ತೊಂದು ಆಯಪ್ ಅನ್ನು ಅಳವಡಿಸಲು ಅನುಕೂಲ ಕಲ್ಪಿಸಿದ್ದವು. ಅದಕ್ಕೆ ಪ್ರತ್ಯೇಕವಾಗಿ ಆಯಪ್ ಇನ್‌ಸ್ಟಾಲ್ ಆಗುತ್ತಿತ್ತು. ನಿಮ್ಮ ಫೋನ್‌ನಲ್ಲೂ ಇದೆಯೇ ಎಂದು ಸೆಟ್ಟಿಂಗ್ಸ್‌ನಲ್ಲಿರುವ ಸ್ಪೆಶಲ್ ಫಂಕ್ಷನ್, ಯುಟಿಲಿಟಿ, ಹೆಚ್ಚುವರಿ ಫಕ್ಷನ್ - ಮುಂತಾದ ಆಯ್ಕೆಗಳಲ್ಲಿ ಹುಡುಕಿದರೆ ತಿಳಿಯಬಹುದು (ವಿವಿಧ ಫೋನ್ ಕಂಪನಿಗಳಲ್ಲಿ ಒಂದೊಂದು ಹೆಸರಿರಬಹುದು).

ಇದಲ್ಲದೆ, ಒಂದು ವಾಟ್ಸ್‌ಆಯಪ್ ಖಾತೆಯನ್ನು ಒಂದು ಮೊಬೈಲ್ ಫೋನ್ ಹಾಗೂ ಇತರ ಮೂರು ಸಾಧನಗಳಲ್ಲಿ Web.WhatsApp.com ಮೂಲಕ (ಕಂಪ್ಯೂಟರ್/ಲ್ಯಾಪ್‌ಟಾಪ್) - ಏಕಕಾಲಕ್ಕೆ ನಾಲ್ಕು ಕಡೆ ಬಳಸುವ ಆಯ್ಕೆ ಈಗಾಗಲೇ ಇದೆ. ವಾಟ್ಸ್‌ಆಯಪ್ ಸೆಟ್ಟಿಂಗ್ಸ್‌ನಲ್ಲಿರುವ Link A Device ಆಯ್ಕೆಯ ಮೂಲಕ ಇದರ ಉಪಯೋಗ ಪಡೆದುಕೊಳ್ಳಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries