ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವಿವರಣೆ ನೀಡಬೇಕು ಹಾಗೂ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.
0
samarasasudhi
ಡಿಸೆಂಬರ್ 14, 2023
ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವಿವರಣೆ ನೀಡಬೇಕು ಹಾಗೂ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.
ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿರುವಂತೆಯೇ ಪ್ರತಾಪ್ ಸಿಂಹ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರು ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಟಿಎಂಸಿ ಆಗ್ರಹಿಸಿದೆ.
'ಮಹುವಾ ಅವರು ಲೋಕಸಭಾ ಪೋರ್ಟಲ್‌ನ ಲಾಗಿನ್ ವಿವರಗಳನ್ನು ಹಂಚಿಕೊಂಡು ದೇಶದ ಭದ್ರತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಉಚ್ಚಾಟನೆ ಮಾಡಲಾಗಿದೆ. ಇಂದು ಬಿಜೆಪಿಯ ಕರ್ನಾಟಕ ಸಂಸದ ಪ್ರತಾಪ್ ಸಿಂಹ ಅವರು ಅತಿಕ್ರಮಣಕಾರರಿಗೆ ಸಂದರ್ಶಕರ ಪಾಸ್ ನೀಡುವ ಮೂಲಕ ಇಡೀ ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ತಳ್ಳಿದ್ದಾರೆ' ಎಂದು ಟಿಎಂಸಿಯ ಸಂಸದೀಯ ಪಕ್ಷದ ನಾಯಕ ಸುದೀಪ್ ಬಂಡೋಪಾಧ್ಯಾಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
' ಪಾಸ್‌ವರ್ಡ್ ನೀಡಿದ ವಿಷಯದ್ಲಿ ಮಹುವಾ ಅವರನ್ನು ಉಚ್ಚಾಟಿಸಲಾಯಿತು. ಅದನ್ನು ದೇಶದ ಭದ್ರತೆಗೆ ತಳಕು ಹಾಕಲಾಯಿತು. ಅತಿಕ್ರಮಣಕಾರರಿಗೆ ಪಾಸ್ ನೀಡಿದ ಸಂಸದರನ್ನು ಸ್ಪೀಕರ್ ಅವರು ಹೆಸರಿಸಬೇಕು. ಇದು ಭದ್ರತೆಯ ಪ್ರಶ್ನೆಯಲ್ಲವೇ? ಹೊಗೆ ವಿಷಕಾರಿ ಆಗಿದ್ದರೆ ಅನೇಕ ಸಂಸದರು ಘಾಸಿಗೊಳ್ಳುತ್ತಿದ್ದರು' ಎಂದಿದ್ದಾರೆ.
ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರು, 'ಪಾಸ್ ಕೇಳಿದವರ ಹಿನ್ನೆಲೆ ಪರಿಶೀಲಿಸುವುದು ಸಂಸದರ ಕರ್ತವ್ಯ. ಸಿಂಹ ಅವರ ನಿರ್ಲಕ್ಷ್ಯ ಸಮಸ್ಯೆಗೆ ಕಾರಣವಾಗಿದೆ' ಎಂದರು.
ಈ ವಿಷಯದ ಬಗ್ಗೆ ತಮ್ಮ ಮುಂದಿನ ನಡೆ ನಿರ್ಧರಿಸಲು 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಗುರುವಾರ ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಸಭೆ ಸೇರಲಿವೆ. ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಭೇಟಿ ಮಾಡುವ ಬಗ್ಗೆಯೂ ಆಲೋಚಿಸಲಾಗುತ್ತಿದೆ ಎಂದು ಸುದೀಪ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.