ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸುತ್ತಿದ್ದಾಗ ಆರ್‌ಎಲ್‌ಪಿ ಪಕ್ಷದ ಏಕೈಕ ಸಂಸದ ಗುರುವಾರ ಸ್ಪೀಕರ್ ಅವರ ಪೋಡಿಯಂ ಹತ್ತಲು ಯತ್ನಿಸಿದ ಘಟನೆ ನಡೆದಿದೆ.
0
samarasasudhi
ಡಿಸೆಂಬರ್ 14, 2023
ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರತಿಭಟನೆ ನಡೆಸುತ್ತಿದ್ದಾಗ ಆರ್‌ಎಲ್‌ಪಿ ಪಕ್ಷದ ಏಕೈಕ ಸಂಸದ ಗುರುವಾರ ಸ್ಪೀಕರ್ ಅವರ ಪೋಡಿಯಂ ಹತ್ತಲು ಯತ್ನಿಸಿದ ಘಟನೆ ನಡೆದಿದೆ.
ಗದ್ದಲದ ಹಿನ್ನೆಲೆಯಲ್ಲಿ ಒಮ್ಮೆ ಸದನ ಮುಂದೂಡಿಕೆಯಾಯಿತು. ನಂತರ, ಮಧ್ಯಾಹ್ನ 2 ಗಂಟೆಗೆ ಮತ್ತೆ ಆರಂಭವಾದಾಗ, ಭದ್ರತಾ ಲೋಪದ ಬಗ್ಗೆ ಉತ್ತರಿಸಲು ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಹಾಜರಿರುವಂತೆ ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಾಗ, ಪ್ರಧಾನ ಕಾರ್ಯದರ್ಶಿ ಕುರ್ಚಿಯ ಪಕ್ಕದಲ್ಲಿ ನಿಂತಿದ್ದ ಬೇನಿವಾಲ್, ಹಲವು ಅಡಿ ಎತ್ತರವಿರುವ ಸ್ಪೀಕರ್ ಪೋಡಿಯಂ ಅನ್ನು ಹತ್ತಲು ಯತ್ನಿಸಿದರು.
ಈ ಮಧ್ಯೆ, ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಐವರು ಕಾಂಗ್ರೆಸ್ ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿತು. ನಂತರ, ಕಲಾಪದ ಅಧ್ಯಕ್ಷತೆ ವಹಿಸಿದ್ದ ಬಿ ಮಹತಾಬ್ ಅವರು ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಕಲಾಪಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಲು ಐವರು ಸಂಸದರ ಹೆಸರನ್ನು ಸ್ವತಃ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದರು.