ರಾಜ್ಯಸಭೆಯು ಈ ಮಸೂದೆಗೆ ಗುರುವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಮಸೂದೆಗೆ ಲೋಕಸಭೆಯು ಬುಧವಾರ ಅಂಗೀಕಾರ ನೀಡಿತ್ತು. ಸಾರ್ವಜನಿಕ ತುರ್ತು ಸಂದರ್ಭಗಳಲ್ಲಿ ಅಥವಾ ಸಾರ್ವಜನಿಕರ ರಕ್ಷಣೆಗಾಗಿ ದೂರಸಂಪರ್ಕ ಜಾಲವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಈ ಮಸೂದೆಯು ಕೇಂದ್ರಕ್ಕೆ ಅವಕಾಶ ಕಲ್ಪಿಸುತ್ತದೆ.
ಸಾರ್ವಜನಿಕ ತುರ್ತು ಸಂದರ್ಭಗಳಲ್ಲಿ ಸಂದೇಶವೊಂದರ ರವಾನೆಯನ್ನು ತಡೆಹಿಡಿಯಲು ಹಾಗೂ ಸಂದೇಶವನ್ನು ಕದ್ದಾಲಿಸಲು ಕೂಡ ಮಸೂದೆಯು ಅವಕಾಶ ಕಲ್ಪಿಸುತ್ತದೆ.
ಸಿ.ಇ.ಸಿ ನೇಮಕ ಮಸೂದೆ ಅಂಗೀಕಾರ
ಮುಖ್ಯ ಚುನಾವಣಾ ಆಯುಕ್ತ (ಸಿ.ಇ.ಸಿ) ಹಾಗೂ ಚುನಾವಣಾ ಆಯುಕ್ತರ (ಇ.ಸಿ) ನೇಮಕಕ್ಕೆ ತ್ರಿಸದ್ಯ ಸಮಿತಿಯೊಂದನ್ನು ರಚಿಸುವ ಮಸೂದೆಗೆ ಲೋಕಸಭೆಯು ಗುರುವಾರ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ನಿಯಮಗಳು ಮತ್ತು ಸೇವಾ ಅವಧಿ) ಮಸೂದೆ 2023ಕ್ಕೆ ರಾಜ್ಯಸಭೆಯ ಅಂಗೀಕಾರ ಈಗಾಗಲೇ ದೊರೆತಿದೆ.
ಲೋಕಸಭೆಯಲ್ಲಿ ಚರ್ಚೆಗೆ ಉತ್ತರ ನೀಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, 'ಸಿ.ಇ.ಸಿ ಮತ್ತು ಇ.ಸಿ. ಸೇವಾ ನಿಯಮಗಳಿಗೆ ಸಂಬಂಧಿಸಿದ 1991ರ ಕಾಯ್ದೆಯು ಅರೆಬೆಂದ ಕಾನೂನಾಗಿತ್ತು. ಈಗಿನ ಮಸೂದೆಯು ಆ ಕಾಯ್ದೆಯಲ್ಲಿ ಇಲ್ಲದಿದ್ದ ಆಯಾಮಗಳನ್ನೂ ಒಳಗೊಂಡಿದೆ' ಎಂದು ತಿಳಿಸಿದರು.
ಪತ್ರಿಕೆ ನೋಂದಣಿ ಸರಳ
ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದ ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆ 2023ಕ್ಕೆ ಸಂಸತ್ತು ಗುರುವಾರ ಅಂಗೀಕಾರ ನೀಡಿದೆ. ಈ ಮಸೂದೆಯು ಬ್ರಿಟಿಷರ ಕಾಲದ ಪಿಆರ್‌ಬಿ ಕಾಯ್ದೆ 1867ರ ಬದಲಿಗೆ ಜಾರಿಗೆ ಬರಲಿದೆ.
ಈ ಮಸೂದೆಯು ಪತ್ರಿಕೆಗಳ ಹಾಗೂ ನಿಯತಕಾಲಿಕೆಗಳ ನೋಂದಣಿಯನ್ನು ಎಂಟು ಹಂತಗಳ ಪ್ರಕ್ರಿಯೆಗೆ ಬದಲಾಗಿ, ಒಂದು ಹಂತಕ್ಕೆ ತಗ್ಗಿಸಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದರು.