ನವದೆಹಲಿ: ಜನವರಿ 22ರಂದು ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಮಿಳುನಾಡಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಅನುಮತಿ ಕೋರಿ 288 ಮನವಿಗಳು ಸಲ್ಲಿಕೆಯಾಗಿದ್ದು, ಅವುಗಳ ಪೈಕಿ 252 ಮನವಿಗಳಿಗೆ ಒಪ್ಪಿಗೆ ನೀಡಲಾಗಿತ್ತು ಎಂದು ತಮಿಳುನಾಡು ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
0
samarasasudhi
ಜನವರಿ 30, 2024
ನವದೆಹಲಿ: ಜನವರಿ 22ರಂದು ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಮಿಳುನಾಡಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಅನುಮತಿ ಕೋರಿ 288 ಮನವಿಗಳು ಸಲ್ಲಿಕೆಯಾಗಿದ್ದು, ಅವುಗಳ ಪೈಕಿ 252 ಮನವಿಗಳಿಗೆ ಒಪ್ಪಿಗೆ ನೀಡಲಾಗಿತ್ತು ಎಂದು ತಮಿಳುನಾಡು ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠಕ್ಕೆ ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಅಮಿತ್ ಆನಂದ್ ತಿವಾರಿ ಮಾಹಿತಿ ನೀಡಿದ್ದು, 36 ಮನವಿಗಳನ್ನು ಕಾನೂನು ಸುವ್ಯವಸ್ಥೆಯ ಸಲುವಾಗಿ ನಿರಾಕರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಪೂಜೆಗೆ ಅನುಮತಿ ನಿರಾಕರಿಸಿರುವ ವಿಚಾರವು ಹೈಕೋರ್ಟ್‌ನ ಮಧುರೈ ಮತ್ತು ಮದ್ರಾಸ್ ಪೀಠಗಳಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯನ್ನು ರದ್ದು ಮಾಡಬೇಕೆಂದು ತಿವಾರಿ ಮನವಿ ಮಾಡಿದ್ದಾರೆ.
ಮದ್ರಾಸ್ ಹೈಕೋರ್ಟ್‌ನ ಪೀಠಗಳ ಮುಂದೆ ವಿಚಾರಣೆಗೆ ಬಾಕಿ ಇರುವ ಅರ್ಜಿಗಳ ಮಾಹಿತಿ ಹಾಗೂ ಪೂಜೆಗೆ ಅನುಮತಿ ನೀಡಿದ ಹಾಗೂ ನಿರಾಕರಿಸಿದ ಬಗ್ಗೆ ವಿವರವಾದ ಅಫಿಡವಿಟ್ ಅನ್ನು 15 ದಿನಗಳ ಒಳಗಾಗಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅಮಿತ್ ಆನಂದ್ ತಿವಾರಿ ಅವರಿಗೆ ಸೂಚಿಸಿತು.
ತಮಿಳುನಾಡಿನ ದೇವಸ್ಥಾನಗಳಲ್ಲಿ ಅಯೋಧ್ಯೆಯ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ನಿಷೇಧಿಸಿ ಜನವರಿ 20ರಂದು ಹೊರಡಿಸಿದ್ದ 'ಮೌಖಿಕ ಆದೇಶ' ರದ್ದುಪಡಿಸಬೇಕೆಂದು ಕೋರಿ ವಿನೋಜ್ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. 15 ದಿನಗಳ ನಂತರ ವಿಚಾರಣೆ ಮುಂದುವರಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.