ಅಯೋಧ್ಯೆ: ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ವೇಳೆ ಆಯೋಜಿಸಿದ್ದ 'ಮಂಗಲ ಧ್ವನಿ' ಕಾರ್ಯಕ್ರಮದಲ್ಲಿ ಐವತ್ತು ಬಗೆಯ ಸಾಂಪ್ರದಾಯಿಕ ಸಂಗೀತ ವಾದ್ಯಗಳ ಮಾಧುರ್ಯವು ಅನುರಣಿಸಿತು. ಅಯೋಧ್ಯೆಯ ಕವಿ ಯತೀಂದ್ರ ಮಿಶ್ರಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
0
samarasasudhi
ಜನವರಿ 23, 2024
ಅಯೋಧ್ಯೆ: ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ವೇಳೆ ಆಯೋಜಿಸಿದ್ದ 'ಮಂಗಲ ಧ್ವನಿ' ಕಾರ್ಯಕ್ರಮದಲ್ಲಿ ಐವತ್ತು ಬಗೆಯ ಸಾಂಪ್ರದಾಯಿಕ ಸಂಗೀತ ವಾದ್ಯಗಳ ಮಾಧುರ್ಯವು ಅನುರಣಿಸಿತು. ಅಯೋಧ್ಯೆಯ ಕವಿ ಯತೀಂದ್ರ ಮಿಶ್ರಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಉತ್ತರ ಪ್ರದೇಶದ ಪಖಾವಾಜ್, ಕೊಳಲು ಮತ್ತು ಡೋಲಕ್; ಕರ್ನಾಟಕದ ವೀಣೆ; ಪಂಜಾಬ್‌ನ ಅಲ್ಗೋಜಾ; ಮಹಾರಾಷ್ಟ್ರದ ಸುಂದರಿ; ಒಡಿಶಾದ ಮರ್ದಲ; ಮಧ್ಯಪ್ರದೇಶದ ಸಂತೂರ್; ಮಣಿಪುರದ ಪುಂಗ್; ಅಸ್ಸಾಂನ ನಗಡ ಮತ್ತು ಕಾಲಿ; ಛತ್ತೀಸಗಢದ ತಂಬೂರ; ದೆಹಲಿಯ ಶೆಹನಾಯಿ; ರಾಜಸ್ಥಾನದ ರಾವಣಹತ; ಪಶ್ಚಿಮ ಬಂಗಾಳದ ಶಿರ್ಖೋಲ್ ಮತ್ತು ಸರೋದ್; ಆಂಧ್ರಪ್ರದೇಶದ ಘಟಂ; ಜಾರ್ಖಂಡ್‌ನ ಸಿತಾರ್; ಗುಜರಾತ್‌ನ ಸಂತರ್; ಬಿಹಾರದ ಪಖಾವಾಜ್, ಉತ್ತರಾಖಂಡದ ಹುಡ್ಕಾ; ತಮಿಳುನಾಡಿನ ನಾಗಸ್ವರ, ತವಿಲ ಮತ್ತು ಮೃದಂಗದ ಧ್ವನಿ ಕೇಳುಗರ ಮನವನ್ನು ತುಂಬಿತು.
'ಮಂಗಲ ಧ್ವನಿ' ಕಾರ್ಯಕ್ರಮಕ್ಕೂ ಮೊದಲು ಸೋನು ನಿಗಂ, ಅನುರಾಧಾ ಪೌಡ್ವಾಲ್ ಮತ್ತು ಶಂಕರ್ ಮಹದೇವನ್ ಅವರು ರಾಮನಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಿದರು. 'ಈ ಸಂಗೀತ ಕಾರ್ಯಕ್ರಮವು ಪ್ರತಿ ಭಾರತೀಯನ ಪಾಲಿಗೆ ಮಹತ್ವಪೂರ್ಣವಾದ ಸಂದರ್ಭ. ರಾಮನಿಗೆ ಗೌರವ ಸೂಚಿಸಲು ಈ ಕಾರ್ಯಕ್ರಮವು ವಿಭಿನ್ನ ಪರಂಪರೆಗಳನ್ನು ಒಟ್ಟುಗೂಡಿಸಿದೆ' ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.