HEALTH TIPS

ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸರಿಯಲ್ಲ: ಭುಗಿಲೆದ್ದ ಭಿನ್ನಮತ

                ಖನೌ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಆಯೋಜನೆ ಮತ್ತು ಅದಕ್ಕೆ ಆಹ್ವಾನಿಸಿರುವ ಕೆಲ ಅತಿಥಿಗಳ ಕುರಿತು ಹಿಂದುತ್ವದ ಪ್ರಮುಖ ಪ್ರತಿಪಾದಕರು ಹಾಗೂ ಧಾರ್ಮಿಕ ಪ್ರಮುಖರಾದ ನಾಲ್ವರು 'ಶಂಕರಾಚಾರ್ಯರ' ನಡುವೆಯೇ ಭಿನ್ನಮತ ವ್ಯಕ್ತವಾಗಿದೆ.

                ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಸಮಾರಂಭಕ್ಕೆ ಆಹ್ವಾನಿಸಿರುವ ಕೆಲವು ಅತಿಥಿಗಳಿಗೆ ಸಂಬಂಧಿಸಿ ಸಂಘಟಕರ ವಿರುದ್ಧ ಇಬ್ಬರು ಶಂಕರಾಚಾರ್ಯರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

                ಅಯೋಧ್ಯೆಯಲ್ಲಿ ಇದೇ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು 'ಹಿಂದುತ್ವದ ತತ್ವ ಹಾಗೂ ಸಿದ್ಧಾಂತಗಳಿಗೆ ವಿರುದ್ಧವಾಗಿದೆ' ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.

             ಉತ್ತರಾಖಂಡದ ಬದರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್‌ ಅವರು, 'ಅಪೂರ್ಣ ನಿರ್ಮಾಣದ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯೇ ಹಿಂದುತ್ವದ ತತ್ವಗಳು ಹಾಗೂ ಸನಾತನ ಧರ್ಮಕ್ಕೆ ವಿರುದ್ಧವಾದುದು' ಎಂದು ಹೇಳಿದ್ದಾರೆ.

                 ರಾಮಮಂದಿರ ನಿರ್ಮಾಣದ ಉಸ್ತುವಾರಿ ಹೊಂದಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಅಧಿಕಾರಿಗಳು ಈ ಕೂಡಲೇ ರಾಜೀನಾಮೆ ನೀಡಬೇಕು, ರಾಮಮಂದಿರವನ್ನು 'ರಾಮನಂದಿ ಪಂಥ'ಕ್ಕೆ (ಟ್ರಸ್ಟ್) ಒಪ್ಪಿಸಬೇಕು. ಪಂಥವು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸುವ ಹಕ್ಕು ಹೊಂದಿದೆ ಎಂದೂ ಪ್ರತಿಪಾದಿಸಿದ್ದಾರೆ.

              'ರಾಮಮಂದಿರವು ರಾಮನಂದಿ ಪಂಥಕ್ಕೆ ಸೇರುವುದೇ ಆಗಿದ್ದರೆ, ಅದರ ಕಾರ್ಯದರ್ಶಿ ಹಾಗೂ ಇತರೆ ಪದಾಧಿಕಾರಿಗಳು ಏನು ಮಾಡುತ್ತಿದ್ದಾರೆ' ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

              ಈ ಕುರಿತಂತೆ 'ಎಕ್ಸ್' ಜಾಲತಾಣದಲ್ಲಿ ಅನಿಸಿಕೆಯನ್ನು ಹಂಚಿಕೊಂಡಿರುವ ಅವರು, 'ನಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವಾಗಿ ಇಲ್ಲ. ನಾನು ಕೂಡಾ ಅವರ ಹಿತೈಷಿಯೇ ಆಗಿದ್ದೇನೆ. ಅದಕ್ಕಾಗಿಯೇ, ಅವರಿಗೆ ಸೂಕ್ತವಾದ ಸಲಹೆಯನ್ನು ನೀಡುತ್ತಿದ್ದೇನೆ' ಎಂದು ಹೇಳಿದ್ದಾರೆ.

ಪುರಿ ಮೂಲದ ಗೋವರ್ಧನ ಪೀಠದ ಶಂಕರಾಚಾರ್ಯರಾದ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಕೂಡಾ, 'ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಸನಾತನ ಧರ್ಮಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ' ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.

              'ಒಬ್ಬ ವ್ಯಕ್ತಿಯ ನಡವಳಿಕೆ, ಅವರು ಎಷ್ಟೇ ಗೌರವಾನ್ವಿತ ಸ್ಥಾನದಲ್ಲಿಯೇ ಇರಲಿ, ಸರಿಯಲ್ಲ ಎನಿಸಿದಾಗ ಖಂಡಿತವಾಗಿ ವಿರೋಧಿಸಬೇಕು. ಶ್ರೀ ರಾಮಜನ್ಮಭೂಮಿ ಬಗ್ಗೆಯೂ ಈ ಅಂಶ ಮನದಲ್ಲಿರಬೇಕು' ಎಂದು 'ಎಕ್ಸ್' ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

             'ಮೋದಿ ಜೀ ಅವರು ದೇವಸ್ಥಾನ ಉದ್ಘಾಟನೆ ಮಾಡುತ್ತಾರೆ, ಮೂರ್ತಿಯನ್ನು ಸ್ಪರ್ಶಿಸುತ್ತಾರೆ. ನಾನೇನು ಮಾಡಲಿ, ಚಪ್ಪಾಳೆ ತಟ್ಟಲಾ? ನನ್ನ ಸ್ಥಾನಕ್ಕೂ ಸ್ವಲ್ಪ ಘನತೆ ಇದೆ. ಧಾರ್ಮಿಕ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯದ ಕಾರ್ಯಕ್ರಮಕ್ಕೆ ನಾನು ಏಕೆ ಹೋಗಬೇಕು' ಎಂದು ಅವರು ಪ್ರಶ್ನಿಸಿದ್ದಾರೆ.

                      ಆದರೆ, ಶೃಂಗೇರಿ ಮಠದ ಶಂಕರಾಚಾರ್ಯರಾಗಿರುವ ಸ್ವಾಮಿ ಭಾರತೀ ತೀರ್ಥ ಮತ್ತು ಗುಜರಾತ್ ಮೂಲದ ದ್ವಾರಕಾ ಪೀಠದ ಶಂಕರಾಚಾರ್ಯರಾಗಿರುವ ಸ್ವಾಮಿ ಸದಾನಂದ ಸರಸ್ವತಿ ಅವರು, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದಾರೆ.

'ಇದು, ಸನಾತನ ಧರ್ಮದ ಬೆಂಬಲಿಗರು, ಪ್ರತಿಪಾದಕರಿಗೆ ಸಂತಸದ ಸಮಯ' ಎಂದು ಈ ಇಬ್ಬರು ಶಂಕರಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.

               'ನಾವೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ವಿರುದ್ಧವಾಗಿದ್ದೇವೆ ಎಂದು ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು 'ಸರಿಯಾದುದಲ್ಲ' ಎಂದೂ ತಳ್ಳಿಹಾಕಿದ್ದಾರೆ. ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಇವರು ಖಚಿತವಾಗಿ ಏನನ್ನೂ ಹೇಳದೇ ಮೌನವಹಿಸಿದ್ದಾರೆ.

ಶಂಕರಾಚಾರ್ಯರನ್ನು ಹಿಂದುತ್ವ ಸಿದ್ಧಾಂತದ ಪ್ರಮುಖ ಪ್ರಭಾವಿಗಳು ಎಂದು ಪರಿಗಣಿಸಲಾಗುತ್ತದೆ. ದೊಡ್ಡ ಜನಸಮೂಹದ ಬೆಂಬಲವನ್ನು ಹೊಂದಿರುವ ಇವರು, ದೇಶದಲ್ಲಿರುವ ಸಂತರು ಮತ್ತು ಸ್ವಾಮೀಜಿಗಳಲ್ಲಿಯೇ ಹೆಚ್ಚಿನ ಗೌರವಾತಿಥ್ಯಕ್ಕೂ ಪಾತ್ರರಾಗುತ್ತಾರೆ.

                  ಶಂಕರಾಚಾರ್ಯರ ನಡುವಿನ ಭಿನ್ನಮತ ಕುರಿತ ಬೆಳವಣಿಗೆಗೆ ಪ್ರತಿಕ್ರಿಯಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದಾರೆ. ಉದ್ದೇಶಿತ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂದೂ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries