ನವದೆಹಲಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆಗೆ ಅವಕಾಶ ನೀಡಿರುವ ವಾರಾಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ತರಾತುರಿಯಲ್ಲಿ ನೀಡಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB ) ಶುಕ್ರವಾರ ಪ್ರತಿಪಾದಿಸಿದೆ.
0
samarasasudhi
ಫೆಬ್ರವರಿ 02, 2024
ನವದೆಹಲಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆಗೆ ಅವಕಾಶ ನೀಡಿರುವ ವಾರಾಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ತರಾತುರಿಯಲ್ಲಿ ನೀಡಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB ) ಶುಕ್ರವಾರ ಪ್ರತಿಪಾದಿಸಿದೆ.
1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ದೇಶದಲ್ಲಿ ಉದ್ಭವಿಸುವ ವಿವಾದಗಳನ್ನು ತಡೆಯಲು ಜಾರಿಗೆ ತರಬೇಕು ಎಂದೂ ಆಗ್ರಹಿಸಿದೆ.
ವಾರಾಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಅಂಜುಮಾನ್ ಇಂತೇಜಾಮಿಯಾ ಸಮಿತಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರುವರಿ 6ಕ್ಕೆ ಮುಂದೂಡಿದ ಬೆನ್ನಲ್ಲೇ ಎಐಎಂಪಿಎಲ್‌ಬಿನಿಂದ ಈ ಪ್ರತಿಕ್ರಿಯೆ ಬಂದಿದೆ .
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಮಾತನಾಡಿ, 'ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿರುವುದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ ಜಾತ್ಯತೀತತೆಯನ್ನು ನಂಬಿರುವ ಇತರ ಧರ್ಮದವರಿಗೂ ನೋವುಂಟು ಮಾಡಿದೆ. ಮಸೀದಿ ನಿರ್ಮಿಸಲು ಮಂದಿರವನ್ನು ಕೆಡವಲಾಗಿದೆ ಎಂಬುವುದು ತಪ್ಪು ಕಲ್ಪನೆ. ಮಸೀದಿ ನಿರ್ಮಿಸಲು ಯಾರೊಬ್ಬರ ಜಮೀನನ್ನು ಕಸಿದುಕೊಳ್ಳುವುದನ್ನು ಇಸ್ಲಾಂ ಅನುಮತಿಸುವುದಿಲ್ಲ' ಎಂದು ಅವರು ಹೇಳಿದರು.
ನ್ಯಾಯಾಲಯವು ತರಾತುರಿಯಲ್ಲಿ ತೀರ್ಪು ನೀಡಿದೆ. ಅಲ್ಲದೇ ಮುಸ್ಲಿಂ ಕಡೆಯವರಿಗೆ ತನ್ನ ವಾದವನ್ನು ವಿವರವಾಗಿ ಮಂಡಿಸಲು ಅವಕಾಶವನ್ನು ನೀಡಲಿಲ್ಲ . ಇದು ನ್ಯಾಯಾಂಗದ ಮೇಲಿನ ಅಲ್ಪಸಂಖ್ಯಾತರ ವಿಶ್ವಾಸವನ್ನು ಕುಗ್ಗಿಸಿದೆ ಎಂದು ರಹಮಾನಿ ತಿಳಿಸಿದರು.
ಬಾಬರಿ ಮಸೀದಿ ತೀರ್ಪಿನಲ್ಲಿ , ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಲಾಗಿದೆ ಎಂದು ಒಪ್ಪಿಕೊಳ್ಳಲಾಗಿದೆ. ಆದರೆ ಅದೇ ನಂಬಿಕೆ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನ್ಯಾಯಾಲಯಗಳು ಆಧಾರದ ಮೇಲೆ ತೀರ್ಪು ನೀಡಬೇಕು ಎಂದು ಆಗ್ರಹಿಸಿದರು.
ಆರಾಧನಾ ಸ್ಥಳಗಳ ಕಾಯಿದೆ ಪ್ರಮುಖ ಕಾನೂನಾಗಿದ್ದು, ಅದರ ಮೂಲಕ ನಾವು ವಿವಾದಗಳನ್ನು ಬಗೆಹರಿಸಬಹುದು ಎಂದೂ ಅವರು ಹೇಳಿದರು.