ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ ಶೇ 40ರಷ್ಟು ಬೇಡಿಕೆ ಹೆಚ್ಚಲಿದೆ ಎಂದು ವಿಮಾನಯಾನ ಕ್ಷೇತ್ರದ ಪರಿಣತರು ಅಂದಾಜಿಸಿದ್ದಾರೆ.
ಶೀಘ್ರವೇ, ಲೋಕಸಭೆಗೆ ಚುನಾವಣೆ ಘೋಷಣೆಯಾಗಲಿದೆ.
'ಆದರೆ, ಈ ಬೇಡಿಕೆಗೆ ಹೋಲಿಸಿದರೆ ದೇಶದಲ್ಲಿ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಲಭ್ಯತೆ ಕಡಿಮೆ ಇದೆ' ಎಂದು ಕ್ಲಬ್ ಒನ್ ಏರ್ ಸಿಇಒ ರಾಜನ್ ಮೆಹ್ರಾ ತಿಳಿಸಿದ್ದಾರೆ.
ಗಂಟೆ ಲೆಕ್ಕದಲ್ಲಿ ಇವುಗಳಿಗೆ ಬಾಡಿಗೆ ದರ ನಿಗದಿಪಡಿಸಲಾಗುತ್ತದೆ. ಸದ್ಯ ಚಾರ್ಟರ್ಡ್ ವಿಮಾನಗಳಿಗೆ ಒಂದು ಗಂಟೆಗೆ ₹4.5 ಲಕ್ಷದಿಂದ ₹5.25 ಲಕ್ಷ ಇದ್ದರೆ, ಹೆಲಿಕಾಪ್ಟರ್‌ಗಳಿಗೆ ಒಂದು ಗಂಟೆಗೆ ₹1.5 ಲಕ್ಷ ಬಾಡಿಗೆ ದರವಿದೆ.
'ಹಿಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಶೇ 30ರಿಂದ ಶೇ 40ರಷ್ಟು ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯಿದೆ' ಎಂದು ಬ್ಯುಸಿನೆಸ್ ಏರ್‌ಕ್ರಾಫ್ಟ್ ಆಪರೇಟರ್ ಅಸೋಸಿಯೇಷನ್‌ನ (ಬಿಎಒಎ) ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಆರ್.ಕೆ. ಬಾಲಿ ಹೇಳುತ್ತಾರೆ.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯು ಹೆಲಿಕಾಪ್ಟರ್ ಮತ್ತು ವಿಮಾನಗಳ ಬಳಕೆಗೆ ₹250 ಕೋಟಿ ಹಾಗೂ ಕಾಂಗ್ರೆಸ್ ಪಕ್ಷವು ₹126 ಕೋಟಿ ವೆಚ್ಚ ಮಾಡಿತ್ತು.
ಈ ಎರಡೂ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ 2019-20ನೇ ಸಾಲಿನ ಲೆಕ್ಕಪತ್ರದಲ್ಲಿ ಈ ವಿವರ ನೀಡಿವೆ.





