ತಿರುವನಂತಪುರ: ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಜಲನಾಡನ್ ಮತ್ತು ಎರ್ನಾಕುಲಂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಶಿಯಾಸ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೇರಳದಲ್ಲಿ ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚುತ್ತಿದ್ದು, ಕಂಜಿರವೇಲಿಯಲ್ಲಿ ಸೋಮವಾರ ಮುಂಜಾನೆ ಆನೆ ತುಳಿತ್ಕೊಳಗಾಗಿ ಇಂದಿರಾ ರಾಮಕೃಷ್ಣನ್(70) ಎಂಬವರು ಮೃತಪಟ್ಟಿದ್ದರು.
ಮಹಿಳೆ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು, ಕುಜಲನಾಡನ್ ನೇತೃತ್ವದಲ್ಲಿ ಕೋತಮಂಗಲಂನಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ನಿರಾಕರಿಸಿದ್ದು, ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಪ್ರತಿಭಟನಾಕಾರರು 'ಪೊಲೀಸ್ ಗೋ ಬ್ಯಾಕ್' ಎಂದು ಘೋಷಣೆಯನ್ನೂ ಕೂಗಿದ್ದರು.
'ಕೋತಮಂಗಲದಲ್ಲಿ ನಡೆದ ಪ್ರತಿಭಟನೆಯ ವೇಳೆ ಅಹಿತಕರ ಘಟನೆಗಳು ನಡೆದಿದ್ದು, ಈ ಸಂಬಂಧ ಕುಜಲನಾಡನ್ ಮತ್ತು ಶಿಯಾಸ್ ಅವರನ್ನು ಪ್ರತಿಭಟನಾ ಸ್ಥಳದಿಂದಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮತ್ತು ಕೇರಳ ಆರೋಗ್ಯ ಕಾರ್ಯಕರ್ತರ ಕಾಯ್ದೆಯ ಸೆಕ್ಷನ್‌ಗಳ ಅಡಿಗಳಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಶೀಘ್ರದಲ್ಲೇ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಜಲನಾಡನ್ ಮತ್ತು ಶಿಯಾಸ್ ಬಂಧನ ಖಂಡಿಸಿ ಧರಣಿ ಕುಳಿತ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು ಎಂದು ಆರೋಪಿಸಿದರು.