ನವದೆಹಲಿ: ಕೇಂದ್ರದ ಸಚಿವ ಸಂಪುಟವು ಚುನಾವಣಾ ಆಯೋಗದ ಶಿಫಾರಸನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನಿಸುವ ಮೂಲಕ ಏಳು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಪ್ರಕ್ರಿಯೆಯನ್ನು ಇಂದು (ಭಾನುವಾರ) ಪ್ರಾರಂಭಿಸಿದೆ.
0
samarasasudhi
ಮಾರ್ಚ್ 17, 2024
ನವದೆಹಲಿ: ಕೇಂದ್ರದ ಸಚಿವ ಸಂಪುಟವು ಚುನಾವಣಾ ಆಯೋಗದ ಶಿಫಾರಸನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನಿಸುವ ಮೂಲಕ ಏಳು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಪ್ರಕ್ರಿಯೆಯನ್ನು ಇಂದು (ಭಾನುವಾರ) ಪ್ರಾರಂಭಿಸಿದೆ.
ಮೊದಲ ಹಂತದಲ್ಲಿ ಏಪ್ರಿಲ್ 19 ರಂದು 102 ಕ್ಷೇತ್ರಗಳಿಗೆ ನಡೆಯುವ ಲೋಕಸಭಾ ಚುನಾವಣೆಗೆ ಮಾರ್ಚ್ 20ರಂದು ಅಧಿಸೂಚನೆ ಹೊರಡಿಸಲಾಗುತ್ತದೆ.
ಈ ಬಾರಿಯ ಲೋಕಸಭೆಯ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಇಂದು ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣಾ ಸಂಬಂಧ ಅಧಿಸೂಚನೆ ಹೊರಡಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 14 (2)ರ ಅಡಿಯಲ್ಲಿ ಚುನಾವಣಾ ಆಯೋಗ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ, ಬಳಿಕ, ಕಾನೂನು ಸಚಿವಾಲಯವು ಅದನ್ನು ಸಚಿವ ಸಂಪುಟ ಮುಂದೆ ಇಡುತ್ತದೆ. ಬಳಿಕ, ಸಚಿವ ಸಂಪುಟವು ಅಧಿಸೂಚನೆ ಹೊರಡಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡುತ್ತದೆ.