ತಿರುವನಂತಪುರಂ: ತಿರುವನಂತಪುರಂ ಎನ್‍ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಮತ್ತು ನ್ಯೂಸ್ 24 ಚಾನೆಲ್ ಮುಖ್ಯಸ್ಥ ಶ್ರೀಕಂಠನ್ ನಾಯರ್ ಅವರಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ನ್ಯೂಸ್ 24 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತರೂರ್ ಅವರು ರಾಜೀವ್ ಚಂದ್ರಶೇಖರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ರಾಜೀವ್ ಚಂದ್ರಶೇಖರ್ ಮತಕ್ಕಾಗಿ ಮತದಾರರಿಗೆ ಹಾಗೂ ಸಮಾಜದ ಮುಖಂಡರಿಗೆ ಹಣ ನೀಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಬಿಜೆಪಿ ರಾಜ್ಯ ಚುನಾವಣಾ ಸಮಿತಿಯ ಕಾನೂನು ಸೆಲ್ ಸಂಚಾಲಕ ಅಡ್ವ. ಆರ್.ಪದ್ಮಕುಮಾರ್ ಹಾಗೂ ಎನ್ ಡಿಎ ಚುನಾವಣಾ ಸಮಿತಿ ಜಿಲ್ಲಾ ಸಂಚಾಲಕ ವಿ.ವಿ. ರಾಜೇಶ್ ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ಸಲ್ಲಿಸಿದ್ದರು.
ಆಯೋಗವು ಶಶಿ ತರೂರ್ ಮತ್ತು ಶ್ರೀಕಂಠನ್ ನಾಯರ್ ಅವರಿಗೆ ನೋಟಿಸ್ ಕಳುಹಿಸಿತ್ತು. ಆದರೆ ಅವರಿಬ್ಬರೂ ಆರೋಪವನ್ನು ಸಾಬೀತುಪಡಿಸಲು ಅಥವಾ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ.
ಸುಳ್ಳು ಆರೋಪಗಳನ್ನು ಮಾಡುವುದು ಮತ್ತು ಹರಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಅದನ್ನು ಆಧರಿಸಿ ಇಬ್ಬರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಸಂದರ್ಶನದ ವಿವಾದಾತ್ಮಕ ಭಾಗಗಳನ್ನು ಬೇರೆ ಯಾವುದೇ ರೂಪದಲ್ಲಿ ಪ್ರಕಟಿಸುವುದನ್ನು ಆಯೋಗ ನಿಷೇಧಿಸಿದೆ.





