ಕಾಸರಗೋಡು: ಕಾಞಂಗಾಡು ವಿಧಾನಸಭಾ ಕ್ಷೇತ್ರದ ಅಜಾನೂರು ಗ್ರಾಮದ ಸಿ.ಕುಪ್ಪಚ್ಚಿ ಜಿಲ್ಲೆಯ ಹಿರಿಯ ಮತದಾರರಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕುಪ್ಪಚ್ಚಿ ಅವರಿಗೆ 111 ವರ್ಷ ಪ್ರಾಯವಾಗಿದ್ದು, ಕೇರಳದ ಮೊದಲ ವಿಧಾನಸಭಾ ಚುನಾವಣೆಯಲ್ಲಿನ ತಮ್ಮ ಚೊಚ್ಚಲ ಮತದಾನವನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಮಹಾಕವಿ ಪಿ ಸ್ಮಾರಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಒಂದನೇ ನಂಬರ್‍ನ ಮತಗಟ್ಟೆಯಲ್ಲಿ 486ನೇ ಸಂಖ್ಯೆಯ ಮತದಾರಳಾಗಿ ಕುಪಚ್ಚಿ ಮತ ಚಲಾಯಿಸಿದ್ದರು. ಅವರು ತಮ್ಮ ಮೊದಲ ಮತದಾನದಿಂದ ತೊಡಗಿ, ವೆಳ್ಳಿಕೋತ್ ಶಾಲೆಯಲ್ಲಿ ಮತ ಚಲಾಯಿಸಿಕೊಮಡು ಬರುತ್ತಿದ್ದಾರೆ. ಇತ್ತೀಚಿನವರೆಗೂ ವಾಹನ ಸೌಲಭ್ಯವನ್ನು ಬಳಸಿಕೊಂಡು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುತ್ತಿದ್ದ ಕುಪ್ಪಚಿ ಕಳೆದ ಚುನಾವಣೆಯಲ್ಲಿ ಮನೆಯಿಂದಲೇ ತಮ್ಮ ಮತ ಚಲಾಯಿಸಿದ್ದರು. ಈ ಬಾರಿಯೂ ಕುಪ್ಪಚ್ಚಿ ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಬಿಎಲ್‍ಒ ಬಿ.ಮೊಯ್ದು ತಿಳಿಸುತ್ತಾರೆ..


