ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಅರೆಸ್ಟ್ ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಹೌದು.. ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೀಡಾಗಿದ್ದ ಅರವಿಂದ್ ಕೇಜ್ರಿವಾಲ್ ಮತ್ತೊಂದುಷ್ಟು ದಿನ ಜೈಲಿನಲ್ಲೇ ಕಾಲ ಕಳೆಯಬೇಕಿದ್ದು, ಬಂಧನ ವಿರೋಧಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಅರ್ಜಿಯಲ್ಲಿ ಕೇಜ್ರಿವಾಲ್, ತಮ್ಮ ಬಂಧನ "ಸಮರ್ಥನೀಯವಲ್ಲ".. ಪಿತೂರಿ ಮಾಡಿದ ಸಾಕ್ಷ್ಯಗಳ ಮೂಲಕ ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆದರೆ ಕೇಜ್ರಿವಾಲ್ ಆರೋಪವನ್ನು ಒಪ್ಪದ ಕೋರ್ಟ್ ಅರ್ಜಿ ತಿರಸ್ಕರಿಸಿದೆ.
ಇಡಿ ಸಂಗ್ರಹಿಸಿದ ವಿಷಯವು ಅರವಿಂದ್ ಕೇಜ್ರಿವಾಲ್ ಇತರರೊಂದಿಗೆ ಪಿತೂರಿ ನಡೆಸಿರುವುದನ್ನು ಬಹಿರಂಗಪಡಿಸುತ್ತದೆ. ಗೋವಾ ಚುನಾವಣೆಯಲ್ಲಿ ಹವಾಲಾ ಹಣ ಬಳಕೆಯಾಗಿದೆ ಎಂಬುದಕ್ಕೆ ಜಾರಿ ನಿರ್ದೇಶನಾಲಯ ಸಾಕ್ಷ್ಯಾಧಾರಗಳನ್ನು ನೀಡಿದೆ. ಹೀಗಾಗಿ ಕೇಜ್ರಿವಾಲ್ ಬಂಧನ ಕಾನೂನಿಗೆ ವಿರುದ್ಧವಾಗಿಲ್ಲ, ರಿಮಾಂಡ್ ಅನ್ನು ಅಕ್ರಮ ಎಂದು ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಕೋರ್ಟ್ ತೀರ್ಪು ಸಮರ್ಥನೀಯವಲ್ಲ, ಸುಪ್ರೀಂ ನಲ್ಲಿ ಪ್ರಶ್ನಿಸುತ್ತೇವೆ: AAP
ಇನ್ನು ದೆಹಲಿ ಹೈಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಆದೇಶವನ್ನು ಸಮರ್ಥನೀಯವಲ್ಲ ಎಂದು ಹೇಳಿರುವ ಆಮ್ ಆದ್ಮಿ ಪಕ್ಷ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದೆ. ಅಲ್ಲದೆ ದೆಹಲಿ ಹೈಕೋರ್ಟ್ ತೀರ್ಪನ್ನು ಆಮ್ ಆದ್ಮಿ ಪಕ್ಷ ಒಪ್ಪುವುದಿಲ್ಲ. ಹೈಕೋರ್ಟ್ ತೀರ್ಪಿನ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ. ಕೇಜ್ರಿವಾಲ್ ನಾಳೆಯೇ ಸುಪ್ರೀಂ ಕೋರ್ಟ್‌ಗೆ ಹೋಗಬಹುದು ಎಂದು ಹೇಳಿದೆ.
ಕೇಜ್ರಿವಾಲ್ ಪ್ರಕರಣದ ಕಿಂಗ್ ಪಿನ್ ಎಂದಿರುವ ED
ಇನ್ನು ಅಬಕಾರಿ ನೀತಿ ಹಗರಣದಲ್ಲಿ ಕೆಲ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಅರವಿಂದ್ ಕೇಜ್ರಿವಾಲ್ ರದ್ದಾಗಿದ್ದ ಕಾನೂನಿಗೆ ತಿದ್ದುಪಡಿ ತಂದಿದ್ದರು. ಆ ಮೂಲಕ ಕಿಕ್ ಬ್ಯಾಕ್ ಪಡೆದಿದ್ದರು. ಹೀಗಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದೇ ಕೇಜ್ರಿವಾಲ್ ಈ ಪ್ರಕರಣದ ಕಿಂಗ್ ಪಿನ್ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.




