HEALTH TIPS

ಅಂಚೆ ಮತ-ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಕರ್ನಾಟಕ ವಾಸ್ತವ್ಯದ ಸಿಬ್ಬಂದಿಗೆ ಅಂಚೆಬ್ಯಾಲೆಟ್ ಕೈಸೇರದೆ ಸಮಸ್ಯೆ

              


 

ಕಾಸರಗೋಡು:ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಉದ್ಯೋಗಿಗಳಲ್ಲೂ ತಳಮಳ ಹೆಚ್ಚಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವರು ಮತದಾನ ಕಳೆದು, ಮತ ಎಣಿಕೆ ಪ್ರಕ್ರಿಯೆ ಪೂರ್ತಿಗೊಂಡ ನಂತರವಷ್ಟೇ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. 

ಈ ಮಧ್ಯೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದು,  ಅಂಚೆ ಮತ ಚಲಾಯಿಸುವ ಕೆಲವು ಸಿಬ್ಬಂದಿಗೆ ಇದುವರೆಗೆ ಪೋಸ್ಟಲ್ ಬ್ಯಾಲೆಟ್ ಪೇಪರ್ ಕೈಸೇರದೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕರ್ನಾಟಕದಲ್ಲಿ ವಾಸ್ತವ್ಯವಿದ್ದು, ಕೇರಳದಲ್ಲಿ ಕೆಲಸದಲ್ಲಿರುವ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವವರಿಗೆ ಅಂಚೆ ಮತ ಪತ್ರಗಳು ಕೈಸೇರದಿರುವುದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದೆಡೆ ಎಸ್ಸೆಸೆಲ್ಸಿ ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನ, ಇನ್ನೊಂದೆಡೆ ಚುನಾವಣಾ ತರಬೇತಿ ಹೀಗೆ ಒಟ್ಟು ಒತ್ತಡಗಳ ಮಧ್ಯೆ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕ ಸಮುದಾಯಕ್ಕೆ ಅಂಚೆ ಮತದಾನಕ್ಕಿರುವ ಬ್ಯಾಲೆಟ್‍ಪೇಪರ್ ಕೈಸೇರದಿರುವುದು ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತಿದೆ.

ಪೆರ್ಲ ಸನಿಹದ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕರ್ತವ್ಯದಲ್ಲಿರುವ ಶಿಕ್ಷಕಿಯೊಬ್ಬರು ಬೆಳ್ತಂಗಡಿಯಲ್ಲಿ ವಾಸ್ತವ್ಯವಿದ್ದು, ಇವರನ್ನು ಕಾಞಂಗಾಡಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇವರು ಬೆಳ್ತಂಗಡಿಯಲ್ಲಿ ಮತದಾನ ಹೊಂದಿದ್ದಾರೆ. ತಮ್ಮ ಮತ ಚಲಾಯಿಸಲು ನಿಗದಿತ ಫಾರ್ಮ್ ಭರ್ತಿಗೊಳಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ್ದರೂ, ಇದುವರೆಗೆ ಅಂಚೆಮತ ಪತ್ರ ಕೈಸೇರಿಲ್ಲ ಎಂಬುದಾಗಿ ಇವರು ಅಲವತ್ತುಕೊಂಡಿದ್ದಾರೆ.

ಅಧಿಕಾರಿಗಳಲ್ಲೇ ಗೊಂದಲ:

ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ನಿವಾಸಿಗಳಿಗೆ ಅಂಚೆ ಮತಪತ್ರ ಒದಗಿಸಿಕೊಡುವ ಬಗ್ಗೆ ಅಧಿಕಾರಿಗಳಲ್ಲೇ ಗೊಂದಲವಿದೆ. ಕರ್ನಾಟಕದಲ್ಲಿ ಮತದಾನದ ಹಕ್ಕು ಹೊಂದಿದ್ದು, ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಅಂಚೆ ಮತಪತ್ರ ಲಭ್ಯವಾಗಿಸಿಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸಬೇಕಾಗಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಲ್ಲೂ ಈ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅಂಚೆ ಮತ ಕೈಸೇರದೆ ಕೆಲವು ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದರೂ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅದಿಕಾರಿಗಳಿಗೆ ಸಾಧ್ಯವಾಗಿಲ್ಲ. ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವ ಮಧ್ಯೆ ಇಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕಾದ ಅದಿಕಾರಿಗಳು,  ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿ ವಲಯದಲ್ಲಿ ದೂರು ಕೇಳಿ ಬರುತ್ತಿದೆ. ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಪ್ರತಿಪಾದಿಸುತ್ತಿರುವ ಆಯೋಗ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗೇ ಮತದಾನದ ಹಕ್ಕಿನಿಂದ ವಂಚಿತರಾಗಬೇಕಾದ ಅನಿವಾರ್ಯ ಸ್ಥಿತಿಗೆ ತಳ್ಳುತ್ತಿರುವ ಬಗ್ಗೆ ಸಿಬ್ಬಂದಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಭಿಮತ: 

ಕರ್ನಾಟಕದಲ್ಲಿ ಮತದಾನ ಹೊಂದಿದ್ದು, ಕೇರಳದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬ್ಯಾಲೆಟ್ ಪೇಪರ್ ಒದಗಿಸಿಕೊಡುವುದು ಅವರು ಮತ ಹೊಂದಿರುವ ವ್ಯಾಪ್ತಿಯ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಒಂದೆರಡು ದಿವಸಗಳಲ್ಲಿ  ಈ ಸಮಸ್ಯೆಗೆ ಸೂಕ್ತ ಪರಿಹಾರ ಲಭ್ಯವಾಗಲಿದೆ.

ಕೆ. ಸುರ್ಜಿತ್, ನೋಡೆಲ್ ಅಧಿಕಾರಿ

ಅಂಚೆ ಮತಗಳ ವಿಭಾಗ, ಕಾಸರಗೋಡು




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries