HEALTH TIPS

ಸಾಮಾಜಿಕ ಜಾಲತಾಣ ದುರ್ಬಳಕೆ ಕಳವಳಕಾರಿ: ಸುಪ್ರೀಂ ಕೋರ್ಟ್

 ವದೆಹಲಿ: ನ್ಯಾಯಾಂಗದ ಪರಿಶೀಲನೆಯಲ್ಲಿ ಇರುವ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು, ಪ್ರತಿಕ್ರಿಯೆಗಳನ್ನು ಹಾಗೂ ಲೇಖನಗಳನ್ನು ಪ್ರಕಟಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ತೀರ್ಪಿಗೆ ಕಾಯ್ದಿರಿಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಪ್ಪುದಾರಿಗೆ ಎಳೆಯುವ ‍ಪೋಸ್ಟ್‌ಅನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಕಾರಣಕ್ಕೆ ಅಸ್ಸಾಂ ಶಾಸಕ ಕರೀಂ ಉದ್ದೀನ್ ಬರಬುಇಯಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಿರುವ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ತ್ರಿವೇದಿ ಅವರ ವಿಭಾಗೀಯ ಪೀಠವು ಈ ಕಳವಳ ವ್ಯಕ್ತಪಡಿಸಿದೆ.

ಬೋಸ್ ಅವರು ಏಪ್ರಿಲ್‌ 10ರಂದು ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾಗಿದ್ದಾರೆ.

'ಯಾವುದೇ ಟೀಕೆ ಅಥವಾ ದೂಷಣೆಯ ಹೊರೆಯನ್ನು ಹೊತ್ತುಕೊಳ್ಳುವಷ್ಟು ನಮ್ಮ ಹೆಗಲು ವಿಶಾಲವಾಗಿದೆ. ಆದರೆ, ನ್ಯಾಯಾಲಯದಲ್ಲಿ ಬಾಕಿ ಇರುವ ವಿಚಾರಗಳಿಗೆ ಸಂಬಂಧಿಸಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸುವ ಮಾತುಗಳು ನ್ಯಾಯಾಲಯಗಳ ಅಧಿಕಾರವನ್ನು ದುರ್ಬಲಗೊಳಿಸುವ ಪ್ರವೃತ್ತಿಯನ್ನು ಹೊಂದಿದ್ದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ' ಎಂದು ‍‍ಪೀಠ ಹೇಳಿದೆ.

ವಾದ-ಪ್ರತಿವಾದದ ಸಂದರ್ಭದಲ್ಲಿ ವಕೀಲರು ಮಂಡಿಸುವ ವಾದಗಳಿಗೆ ನ್ಯಾಯಮೂರ್ತಿಗಳು ಪ್ರತಿಕ್ರಿಯೆ ನೀಡುವುದು ಬಹಳ ಸಹಜ. ಕೆಲವು ಸಂದರ್ಭಗಳಲ್ಲಿ ವಿಷಯವೊಂದರ ಪರವಾಗಿ ಅಥವಾ ಕೆಲವೊಮ್ಮೆ ವಿರುದ್ಧವಾಗಿ ಮಾತನಾಡುವುದು ಇರುತ್ತದೆ ಎಂದು ಪೀಠ ವಿವರಿಸಿದೆ.

'ಆದರೆ, ಅಂತಹ ಮಾತುಗಳು ಅರ್ಜಿದಾರರಿಗಾಗಲಿ, ಪ್ರತಿವಾದಿಗಳಿಗಾಗಲಿ, ಅವರನ್ನು ಪ್ರತಿನಿಧಿಸುವ ವಕೀಲರಿಗಾಗಲಿ ಸತ್ಯವನ್ನು ತಿರುಚಿದ ರೀತಿಯಲ್ಲಿ ಅಥವಾ ಸರಿಯಾದ ಸತ್ಯವನ್ನು ವಿವರಿಸದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೆಗಳನ್ನು ಪ್ರಕಟಿಸುವ ಅಧಿಕಾರ ನೀಡುವುದಿಲ್ಲ' ಎಂದು ಪೀಠ ವಿವರಿಸಿದೆ.

ಶಾಸಕ ಬರಬುಇಯಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೆ ಪೀಠವು ಆದೇಶಿಸಿದೆ. ಅವರು ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ಹೇಳಿದೆ. ಚುನಾವಣೆ ಅರ್ಜಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದ್ದರೂ, ಬರಬುಇಯಾ ಅವರು ತೀರ್ಪು ತಮ್ಮ ಪರವಾಗಿ ಬಂದಿದೆ ಎಂದು ಫೇಸ್‌ಬುಕ್‌ ಮೂಲಕ ಮಾರ್ಚ್ 20ರಂದು ಹೇಳಿದ್ದರು. ನಂತರ ಏಪ್ರಿಲ್‌ 8ರಂದು, ಕೋರ್ಟ್ ಬರಬುಇಯಾ ಅವರ ಅರ್ಜಿಯನ್ನು ಮಾನ್ಯ ಮಾಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries