HEALTH TIPS

ಬೇಕಲ ರಾಮ ನಾಯಕರು ಬರೆದ ಐತಿಹಾಸಿಕ ಪ್ರಸಂಗ: ಕುಂಬಳೆಯ ಜಯಸಿಂಹ ರಾಜ: ಭಾಗ-03

               ಇತ್ತ ಸುಶೀಲಾ ರಾಣಿಯು ಅಷ್ಟ ಮಂತ್ರಿಗಳೊಡನೆ ಕುಂಬಳೆ ಸೀಮೆಯ ಮೂರು ಸಾಸಿರ್ವರನ್ನುಧರ್ಮದಿಂದ ಪಾಲಿಸಿಕೊಂಡಿರಲು ಅವಳಿಗೆ ಒಂದು ಗಂಡುಮಗು ಹುಟ್ಟಿತು. ಅದಕ್ಕೆ ಜಯಸಿಂಹನೆಂದು ನಾಮಕರಣ ಮಾಡಿದಳು. ಉಪನಯನವಾದ ಮೇಲೆ ವಿದ್ಯಾಭ್ಯಾಸಕ್ಕಾಗಿ ಕಣ್ವಾಶ್ರಮಕ್ಕೆ ಕಳುಹಿಸಿದಳು. ಅವನು ಸತತಾಭ್ಯಾಸದಿಂದ ಸಕಲ ವೇದ ಶಾಸ್ತ್ರಗಳ ವ್ಯಾಖ್ಯಾನ ಶಕ್ತಿಯನ್ನು ಪಡೆದನು. ಧನುರ್ವಿದ್ಯೆಯಲ್ಲಿ ಅತುಳ ಶಕ್ತಿಯನ್ನು ಪಡೆದನು. ಪಕ್ಷಿ ಭಾಷೆಯನ್ನು ಬಲ್ಲವನಾದನು. ಋಷಿಗಳಿಂದ ‘ಕವಿಸಿಂಹ’ನೆಂದು ಹೆಸರು ಪಡೆದನು. ವಿದ್ಯಾಭ್ಯಾಸವನ್ನು ಮುಗಿಸಿ ತೀರ್ಥಾಟನೆ ಮಾಡಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಳಿದು ಧಾರಾನದಿಯಲ್ಲಿ ಮಿಂದು ಬಿಲದ್ವಾರದಲ್ಲಿ ಒಂದು ಉಂಗುಷ್ಠದ ಮೇಲೆ ನಿಂತುಕೊಂಡು ಒಂದು ವರ್ಷದವರೆಗೆ ಕಠಿಣ ತಪಸ್ಸನ್ನಾಚರಿಸಿದನು.

                 ಒಂದು ವರ್ಷದ ಬಳಿಕ ಕುಮಾರ ಸ್ವಾಮಿಯು ಪ್ರಸನ್ನನಾಗಿ “ವತ್ಸ ! ನಿನಗೇನು ಬೇಕು?' ಎಂದು ಕೇಳಿದನು. ಆಗ ಜಯಸಿಂಹನು “ಸಕಲ ವಿದ್ಯೆಯನ್ನೂ ಕರುಣಿಸು ಎಂದು ಬೇಡಿಕೊಡನು. “ನಿನ್ನ ಮನೋರಥವು ನೆರವೇರಲಿ! ಋಷಿಗಳು ನಿನಗೆ ಕೊಟ್ಟ 'ಕವಿಸಿಂಹ' ಎಂಬ ಹೆಸರು ಸಾರ್ಥಕವಾಗಲಿ” ಎಂದು ಅದೃಶ್ಯನಾದನು.


                 ಜಯಸಿಂಹನು ರಾಜಧಾನಿಗೆ ಮರಳಿದನು. ಬರುತ್ತಾ ಬೇಳಗ್ರಾಮದ ಕುಮಾರಮಂಗಲದಲ್ಲಿ ತನ್ನ ನಿತ್ಯಾರಾಧನೆಗಾಗಿ ಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಿದನು. ಅಲ್ಲಿಂದ ಮಧೂರಿಗೆ ಬಂದು ಮದನೇಶ್ವರ ದೇವಾಲಯವನ್ನು ಊರ್ಜಿತಗೊಳಿಸಿದನು.

               ಕೆಲವು ದಿನಗಳು ಕಳೆಯಲು ಪಾಂಡ್ಯ ದೇಶದ ರಾಜನು ದೊಡ್ಡ ದಂಡಿನೊಡನೆ ಚಂದ್ರಗಿರಿಯ ಅಳಿವೆಯಲ್ಲಿಳಿದು ಪಾಳೆಯ ಬಿಟ್ಟನು. ಗಡಿಯ ಕಾವಲುಗಾರರು ಈ ಸುದ್ದಿಯನ್ನು ಜಯಸಿಂಹನಿಗೆ ತಿಳಿಸಿದರು. ಸೀಮೆಯ ಮೂರು ಸಾವಿರ ಆಳುಗಳನ್ನೂ ಇತರ ಸಾವಿರ ಬಿಲ್ಲಾಳುಗಳನ್ನೂ ಕರೆಸಿದನು.

                ನಿಸ್ಸಂಶಯದ ಆ ಮಲ್ಲರು ಗಂಡುಡುಗೆಯುಟ್ಟು ಉಕ್ಕಿನ ಕವಚ ತೊಟ್ಟಿದ್ದರು. ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದ್ದರು. ಜಯಸಿಂಹನು ವೀರಕಸೆಯನ್ನು ಬಿಗಿದು ಕನಕ ಕವಚವನ್ನು ತೊಟ್ಟು ತಲೆಹರಿಗೆಯನ್ನಿಟ್ಟು ಕಾಲಿನಲ್ಲಿ ತೊಡರಿನ ಪೆಂಡೆಯವನ್ನು ಕುಣಿಸುತ್ತ ಚಂದ್ರಾಯುಧವನ್ನು ಹಿಡಿದುಕೊಂಡು ನೆರೆದಿದ್ದ ದಂಡಿನೊಡನೆ ಚಂದ್ರಗಿರಿ ಬಯಲಿಗೆ ನಡೆದನು.

              ಎರಡು ಸೇನೆಗಳೂ ರಣೋತ್ಸಾಹದಿಂದ ಕಾಳಗಕ್ಕನುವಾದರು. ಭಯಂಕರವಾದ ಸಮರ ಮಸಗಿತು. ಹೆಣಗಳ ಅಟ್ಟೆ ಉರುಳಿತು. ಕುದುರೆಗಳು ಕೆಡೆದುವು. ಆನೆಗಳು ದಿಕ್ಕೆಟ್ಟುವು. ನರಿ ನಾಯಿಗಳು ಹೆಣಗಳನ್ನು ಹರಿದು ತಿಂದವು.

                   ಹತ್ತು ದಿನಗಳಾದರೂ ಎರಡು ಪಡೆಗಳೂ ಹಿಮ್ಮೆಟ್ಟಲಿಲ್ಲ. ಆಗ ಜಯಸಿಂಹನು ಉರಿದೆದ್ದು ಸುಳಿಗಾಳಿಯಂತೆ ಶತ್ರುವ್ಯೂಹವನ್ನು ಮುತ್ತಿ ಇದಿರಾದ ಕಲಿಗಳನ್ನು ತರಿದಿಕ್ಕಿದನು. ಶತ್ರುಗಳ ದಂಡು ಚೆಲ್ಲಾಪಿಲ್ಲಿಯಾಯಿತು. ಹಲವರು ಅಳಿದರು. ಉಳಿದವರು ಜಾರಿದರು. ಸಿಕ್ಕಿದವರು ಶರಣಾದರು. 

           ಪಾಂಡ್ಯ ರಾಜನು ಸೆರೆಸಿಕ್ಕಿದನು.ಅವನು ತಂದಿದ್ದ ದ್ರವ್ಯರಾಶಿಯನ್ನು ಹಡಗಿನಲ್ಲಿ ತುಂಬಿಸಿ ಅವನೊಡನೆ ಹಡಗನ್ನೇರಿ ಕುಂಬಳೆಗೆ ಬಂದನು. ಬಂಧಿತನಾದ ಪಾಂಡ್ಯ ರಾಜನನ್ನು ತಾಯಿಯ ಕಾಲಮೇಲೆ ಕೆಡಹಿದನು. ಅವಳು ಅವನನ್ನು ಸೆರೆಯಿಂದ ಬಿಡಿಸಿ ಬುದ್ದಿಹೇಳಿ ಕಳುಹಿಸಿಕೊಟ್ಟಳು. 

                 ಈ ಜಯದ ನೆನಪಿಗಾಗಿ ಜಯಸಿಂಹನು ಒಂದು ವಿಜಯ ಸ್ತಂಭವನ್ನು ಸ್ಥಾಪಿಸಿದನು. ಅದೀಗ ಮಧೂರು ದೇವಸ್ಥಾನದಲ್ಲಿದೆ. ಈ ಜಯದಿಂದ ಜಯಸಿಂಹನ ಹೆಸರು ಸಾರ್ಥಕವೆನಿಸಿತು. ತುಳು ನಾಡಿನಲ್ಲೆಲ್ಲ ಅವನ ಕೀರ್ತಿ ಹರಡಿತು. 

                                          (ಇನ್ನೂ ಇದೆ…ನಾಳೆಗೆ ಮುಂದುವರಿಯುವುದು.) 



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries