ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಕೋರ್ಟ್ ಮುಂದೂಡಿದೆ.
0
samarasasudhi
ಜೂನ್ 14, 2024
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಕೋರ್ಟ್ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಲು ಜಾರಿ ನಿರ್ದೇಶನಾಲಯವು (ಇ.ಡಿ) ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಖೇಶ್ ಕುಮಾರ್ ಅವರು ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಜೈಲು ಅಧಿಕಾರಿಗಳಿಗೂ ನ್ಯಾಯಾಧೀಶರು ಸೂಚಿಸಿದ್ದಾರೆ ಎನ್ನಲಾಗಿದೆ.
ಈಚೆಗೆ ಪ್ರಕರಣದಲ್ಲಿ ಜಾಮೀನು ಕೋರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಗೆ ಜಾರಿ ನಿರ್ದೇಶನಾಲಯ ವಿರೋಧ ದಾಖಲಿಸಿತ್ತು.
'ಕೇಜ್ರಿವಾಲ್ ಅವರು ಗಂಭೀರ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಬಳಿ ಇವೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಈ ಹಗರಣಕ್ಕೆ ಸಂಬಂಧಿಸಿದ ತನಿಖೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ' ಎಂದು ಇ.ಡಿ ದೆಹಲಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರಿಗೆ ತಿಳಿಸಿತ್ತು.
ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ ಜಾಮೀನು ನೀಡುವಂತೆ ಕೋರಿದ್ದ ಅರ್ಜಿಯನ್ನು ಪರಿಶೀಲಿಸಿದ್ದ ಕಾವೇರಿ ಭವೇಜಾ ಅವರು, ಕೇಜ್ರಿವಾಲ್ ಅವರ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದರು.
ಕೇಜ್ರಿವಾಲ್ ಅವರಿಗೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಸುಪ್ರೀಂ ಕೋರ್ಟ್ ಮೇ 10ರಂದು ಮಧ್ಯಂತರ ಜಾಮೀನು ನೀಡಿತ್ತು. ಜಾಮೀನು ಅವಧಿಯು ಜೂನ್ 1ಕ್ಕೆ ಕೊನೆಗೊಂಡಿತ್ತು. ಜೂನ್ 2ರಂದು ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಸೂಚಿಸಿತ್ತು.