ಕಾಸರಗೋಡು: ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಾಂಪ್ರದಾಯಿಕ ಟ್ರಸ್ಟಿಗಳಾಗಿ ಕಾಂಗ್ರೆಸ್ ಮುಖಂಡರನ್ನು ನೇಮಕ ಮಾಡುವ ಮೂಲಕ ಕೇರಳದ ಎಲ್ಲಾ ವಲಯಗಳಲ್ಲೂ ಐಎನ್‍ಡಿಐಎ ಮೈತ್ರಿಕೂಟ ರಚಿಸಿಕೊಂಡಿರುವ ಸಂಕೇತವಾಗಿದೆ ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಗರನ್ನು ಹೊರತುಪಡಿಸಿ, ಪಕ್ಷದ ಮುಖಂಡರನ್ನೇ ಟ್ರಸ್ಟಿಗಳಾಗಿ ನೇಮಿಸಲಾಗಿದೆ. ಕಾಂಗ್ರೆಸ್ ನಾಯಕರ ನೇಮಕಾತಿ ನಡೆಸುವ ಉದ್ದೇಶದಿಂದ ಸಿಪಿಎಂ ಮುಖಂಡರು ಟ್ರಸ್ಟಿಗಳ ನೇಮಕಕ್ಕೆ ಅರ್ಜಿ ಸಲ್ಲಿಸದೆ ದೂರ ಉಳಿದಿರುವುದು ಸಂಶಯಕ್ಕೆಡೆಯಾಗಿದೆ. ದೇವಸ್ವಂ ಮಂಡಳಿಯನ್ನು ಬಳಸಿಕೊಂಡು ದೇವಸ್ಥಾನಗಳ ಆಡಳಿತ ಮಂಡಳಿಗೆ ನುಸುಳುವ ಮೂಲಕ ದೇವಸ್ಥಾನದ ಆಡಳಿತದ ಮೇಲೆ ಹಿಡಿತ ಸಾಧಿಸುವ ನಿರ್ಧಾರವನ್ನು ಸಿಪಿಎಂ ಈಗಾಗಲೇ ತೆಗೆದುಕೊಂಡಿದೆ. ಆದರೆ ಕಾಸರಗೋಡು ಕ್ಷೇತ್ರದಲ್ಲಿ ಸಿಪಿಎಂಗೆ ಕಡಿಮೆ ಬಲವಿರುವುದರಿಂದ ಕಾಂಗ್ರೆಸ್ ನಾಯಕರನ್ನು ಬಳಸಿಕೊಂಡು ದೇವಸ್ಥಾನಗಳ ಮೇಲೆ ಹಿಡಿತ ಸಾಧಿಸಲು ಸಿಪಿಎಂ ಯತ್ನಿಸುತ್ತಿದೆ. ಭಕ್ತಾದಿಗಳು ಶ್ರಮವಹಿಸಿ, ಹಣ ಸಂಗ್ರಹದೊಂದಿಗೆ ದೇವಸ್ಥಾನಗಳ ಜೀರ್ಣೋದ್ಧಾರ ಪ್ರಕ್ರಿಯೆಗೆ ಮುಂದಾಗುವ ಸಂದರ್ಭ ಇದಕ್ಕೆ ಕೆಲವೊಂದು ಕಾರಣವೊಡ್ಡಿ ತಡೆಯೊಡ್ಡುವ ಯಾ ಹಣ ವಶಪಡಿಸಿಕೊಳ್ಳಲು ಮಾತ್ರ ದೇವಸ್ವಂ ಮಂಡಳಿ ಹುಮ್ಮಸ್ಸು ತೋರುತ್ತಿದೆ. ಇದಕ್ಕೆ ಕಾಂಗ್ರೆಸ್ ಕೂಡ ಕೈಜೋಡಿಸುತ್ತಿದೆ. ದೇವಸ್ಥಾನದ ಆಡಳಿತದಲ್ಲಿ ಏರ್ಪಟ್ಟಿರುವ ಈ ಅಪವಿತ್ರ ಮೈತ್ರಿ ಬಗ್ಗೆ ಧಾರ್ಮಿಕ ಸಮುದಾಯ ಎಚ್ಚರಿಕೆ ವಹಿಸಬೇಕಿದೆ ಎಂದು ಎಂ.ಎಲ್. ಅಶ್ವಿನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.