ಬದಿಯಡ್ಕ: ಶ್ರೀಕೃಷ್ಣ ಯುವಕಮಂಡಲ ಸೀಟಿಗುಡ್ಡೆ, ಹೊಸಬೆಳಕು ಬಡವರ ಆಶಾಕಿರಣ ಸೇವಾಟ್ರಸ್ಟ್ ಆರ್ಲಪದವು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಬಹುಮುಖ ಪ್ರತಿಭೆ ಚಿತ್ತರಂಜನ್ ಕಡಂದೇಲು ಅವರನ್ನು ಬದಿಯಡ್ಕದ ನಿವಾಸದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶ್ರೀಕೃಷ್ಣ ಯುವಕಮಂಡಲದ ಅಧ್ಯಕ್ಷ ರಾಜೀವ್ ಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ಬೆಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಪ್ರತಿಭೆÉಗಳನ್ನು ಗುರುತಿಸುವ ಮೂಲಕ ಅವರಲ್ಲಡಗಿರುವ ಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕಲೆ ಕಲಾವಿದರನ್ನು ಗೌರವಿಸುವ ಮೂಲಕ ಇಂತಹ ಸಂಘಟನೆಗಳ ಸೇವಾಕಾರ್ಯ ಶ್ಲಾಘನೀಯ ಎಂದರು.
ಮನೋಹರ ಪಡ್ಡಾಯೂರು, ನವೀನ್ ಪುತ್ತೂರು ಮಾತನಾಡಿದರು. ಜ್ಯೋತ್ಸ್ನಾ ಟೀಚರ್ ಕಡಂದೇಲು ಮಾತನಾಡಿ ಎಲ್ಲಾ ಮಕ್ಕಳಲ್ಲೂ ಏನಾದರೊಂದು ಸಾಧನೆ ಮಾಡಬೇಕೆನ್ನುವ ತುಡಿತವಿರುತ್ತದೆ. ಅದಕ್ಕೆ ಸೂಕ್ತವಾದ ಬೆಂಬಲ ಲಭಿಸಿದಾಗ ಆ ಪ್ರತಿಭೆ ಹೊರಜಗತ್ತಿಗೆ ಗೋಚರವಾಗುತ್ತದೆ. ಮಕ್ಕಳ ಸಾಧನೆಗೆ ಎಂದೆಂದೂ ಹೆತ್ತವರ ಪ್ರೋತ್ಸಾಹ ಇರಬೇಕು ಎಂದು ಸಂಘಟನೆಗಳಿಗೆ ಧನ್ಯವಾದ ಸಮರ್ಪಿಸಿದರು. ಹರೀಶ್ ಕುಮಾರ್ ಕಡಂದೇಲು ಉಪಸ್ಥಿತರಿದ್ದರು. ಕಲಾವಿದ ಕೃಷ್ಣಪ್ಪ ಶಿವನಗರ ನಿರೂಪಿಸಿದರು.
ಚಿತ್ತರಂಜನ್ ಕಡಂದೇಲು :
ಬಹುಮುಖ ಪ್ರತಿಭೆ ಚಿತ್ತರಂಜನ್ ಕಡಂದೇಲು ಎಳವೆಯಲ್ಲಿಯೇ ಯಕ್ಷಗಾನ ನಾಟ್ಯ, ಮೃದಂಗ, ಕರಾಟೆಗಳನ್ನು ಅಭ್ಯಾಸ ಮಾಡಿರುತ್ತಾನೆ. ಈತ ಪ್ರಸ್ತುತ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‍ಟು ವಿದ್ಯಾರ್ಥಿ. ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ, ಕರ್ನಾಟಕ ಪ್ರತಿಭಾ ರತ್ನ ಪುರಸ್ಕಾರ, ಕಾಸರಗೋಡು ದಸರಾ ಪ್ರತಿಭಾ ಪುರಸ್ಕಾರ, ಬಾಲ ಪ್ರತಿಭಾ ಸಿರಿ ಗೌರವ ಸಹಿತ ಅನೇಕ ಪುರಸ್ಕಾರಗಳನ್ನು ಈತ ಪಡೆದಿರುತ್ತಾನೆ. ಮಲ್ಲ, ಕೊಲ್ಲಂಗಾನ, ಮಾಣಿಲ, ಹನುಮಗಿರಿ, ಕಟೀಲು ಮೊದಲಾದ ಯಕ್ಷಗಾನ ಮೇಳಗಳು ಈತನ ಪ್ರತಿಭೆಗೆ ವೇದಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಅವರ ಪಡ್ರೆಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಈತ ತನ್ನ ಐದನೇ ವಯಸ್ಸಿನಿಂದ ಯಕ್ಷನಾಟ್ಯ ಅಭ್ಯಾಸ ಮಾಡಿರುತ್ತಾನೆ.




