ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತುಕತೆ ನಡೆಸಿದರು. ಈ ಸಂದರ್ಭ ಉಭಯ ನಾಯಕರು ಭಾರತ-ಬ್ರಿಟನ್ ನಡುವೆ ಪರಸ್ಪರ ಮುಕ್ತ ವ್ಯಾಪಾರ ಒಪ್ಪಂದದಡಿ ಕಾರ್ಯನಿರ್ವಹಿಸಲು ಸಮ್ಮತಿಸಿದರು.
0
samarasasudhi
ಜುಲೈ 07, 2024
ನವದೆಹಲಿ: ಬ್ರಿಟನ್‌ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತುಕತೆ ನಡೆಸಿದರು. ಈ ಸಂದರ್ಭ ಉಭಯ ನಾಯಕರು ಭಾರತ-ಬ್ರಿಟನ್ ನಡುವೆ ಪರಸ್ಪರ ಮುಕ್ತ ವ್ಯಾಪಾರ ಒಪ್ಪಂದದಡಿ ಕಾರ್ಯನಿರ್ವಹಿಸಲು ಸಮ್ಮತಿಸಿದರು.
'ಉಭಯ ನಾಯಕರು ತಮ್ಮ ಮಾತುಕತೆ ನಡುವೆ ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಮೆಲುಕು ಹಾಕಿದರು. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತಂತೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು' ಎಂದು ಹೇಳಿಕೆ ತಿಳಿಸಿದೆ.
ಬ್ರಿಟನ್‌ನ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದ ಸಕಾರಾತ್ಮಕ ಕೊಡುಗೆಗಳನ್ನು ಶ್ಲಾಘಿಸಿದ ಕೀರ್ ಸ್ಟಾರ್ಮರ್, ಜನರ ನಡುವಿನ ನಿಕಟ ಸಂಬಂಧ ಉತ್ತೇಜಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.
ಉಭಯ ನಾಯಕರಿಬ್ಬರೂ ಪರಸ್ಪರ ಸಂಪರ್ಕದಲ್ಲಿರಲು ಸಮ್ಮತಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಕೀರ್‌ಗೆ ಮೋದಿ ಆಹ್ವಾನ ನೀಡಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.
'ಕೀರ್ ಸ್ಟಾರ್ಮರ್ ಜೊತೆ ಮಾತನಾಡಿದ್ದು ಖುಷಿಕೊಟ್ಟಿದೆ. ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಅವರನ್ನು ಅಭಿನಂದಿಸಿದೆ. ನಮ್ಮ ಜನರ ಪ್ರಗತಿ, ಸಮೃದ್ಧಿಗಾಗಿ ಹಾಗೂ ಜಗತ್ತಿನ ಒಳಿತಿಗಾಗಿ ಸಮಗ್ರ ಪಾಲುದಾರಿಕೆ ಹಾಗೂ ಭಾರತ-ಬ್ರಿಟನ್ ನಡುವೆ ದೃಢವಾದ ಆರ್ಥಿಕ ಸಂಬಂಧಗಳನ್ನು ಹೊಂದಲು ನಾವು ಬದ್ಧರಾಗಿದ್ದೇವೆ' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.