ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ನವೀಕರಣ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಸಮಾಲೋಚನಾ ಸಭೆ ಶನಿವಾರ ದೇವಾಲಯ ಸಭಾಂಗಣದಲ್ಲಿ ಜರುಗಿತು.
ಮಧೂರು ಕ್ಷೇತ್ರ ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು, ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವ 2025 ಮಾ. 27ರಿಂದ ಏ. 7ರ ವರೆಗೆ ಜರುಗಲಿದ್ದು, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸಭೆ ಆಯೋಜಿಸಲಾಗಿತ್ತು.
ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಾರಂಭ ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಬೇಕು. ದೇವಸ್ವಂ ಮಂಡಳಿ, ದಾನಿಗಳು ಹಾಗೂ ಭಕ್ತಾದಿಗಳು ಜತೆಯಾಗಿ ಕೆಲಸ ನಿರ್ವಹಿಸುವ ಮೂಲಕ ಬೃಹತ್ ಕಾರ್ಯಕ್ಮದ ಯಶಸ್ವಿ ಸಆಧ್ಯ ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಕೆ.ಕೆ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ ಬಿ.ಕೆ ಮಧೂರು, ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರಾಜೇಶ್, ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಬ್ರೋಶರ್ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಪ್ರಾರ್ಥಿಸಿದರು. ಮಂಜುನಾಥ ಕಾಮತ್ ಸ್ವಾಗತಿಸಿದರು. ಉದಯ ಕೊಲ್ಲಂಬಾರೆ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಕೆ. ವಂದಿಸಿದರು. ಈ ಸಂದರ್ಭ ವಿವಿಧ ಸಮಿತಿಗಳು ತಕ್ಷಣ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಚರ್ಚೆ ಹಾಗೂ ಯೋಜನೆ ತಯಾರಿ, ಪಂಚಾಯಿತಿ ಸಮಿತಿಗಳ ರಚನೆ, ಪ್ರಚಾರಕಾರ್ಯಗಳ ಬಗ್ಗೆ ಚಿಂತನೆ, ಸಮಿತಿಯಲ್ಲಿ ಒಳಪಡಿಸಬೇಕಾದ ತಜ್ಞರ ಹೆಸರು ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಯಿತು.