ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಗರದ ಆಭರಣ ಮಳಿಗೆಯೊಂದರಲ್ಲಿ ನಗದು ಸೇರಿದಂತೆ ₹50 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಆರೋಪದ ಮೇಲೆ 'ಅಗ್ನಿವೀರ್' ಎಂದು ಹೇಳಿಕೊಂಡಿರುವ 19 ವರ್ಷದ ಯುವಕ ಸೇರಿದಂತೆ ಇತರ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0
samarasasudhi
ಆಗಸ್ಟ್ 19, 2024
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಗರದ ಆಭರಣ ಮಳಿಗೆಯೊಂದರಲ್ಲಿ ನಗದು ಸೇರಿದಂತೆ ₹50 ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಆರೋಪದ ಮೇಲೆ 'ಅಗ್ನಿವೀರ್' ಎಂದು ಹೇಳಿಕೊಂಡಿರುವ 19 ವರ್ಷದ ಯುವಕ ಸೇರಿದಂತೆ ಇತರ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೇವಾ ಜಿಲ್ಲೆಯ ಪ್ರಮುಖ ಆರೋಪಿಯಾದ ಮೋಹಿತ್ ಸಿಂಗ್ ಬಘೇಲ್, ತಾನು 'ಅಗ್ನಿವೀರ್' ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಈತನನ್ನು ಪ್ರಸ್ತುತ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಶ್ರದ್ಧಾ ತಿವಾರಿ ಹೇಳಿದ್ದಾರೆ.
ಬಘೇಲ್ ಬಳಿಯಿದ್ದ 'ಅಗ್ನಿವೀರ್' ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಸೇನಾ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಹರಿನಾರಾಯಣಾಚಾರಿ ಮಿಶ್ರಾ ಮಾಹಿತಿ ನೀಡಿದ್ದಾರೆ.
ಭೋಪಾಲ್ ನಗರದ ಮಂಡಿದೀಪ್ ಪ್ರದೇಶದಲ್ಲಿ ತನ್ನ ಸ್ನೇಹಿತ ಆಕಾಶ್ ರಾಯ್‌ನನ್ನು ಭೇಟಿ ಮಾಡಲು ರಜೆಯ ಮೇಲೆ ಬಂದಿದ್ದಾಗಿ ಬಘೇಲ್ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಬಾಗ್ಸೆವಾನಿಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಮಿತ್ ಸೋನಿ ತಿಳಿಸಿದ್ದಾರೆ.
ಬಘೇಲ್ ಮತ್ತು ಆಕಾಶ್ ಇಬ್ಬರೂ ಹೆಲ್ಮೆಟ್ ಧರಿಸಿ ಬಂದೂಕುಗಳೊಂದಿಗೆ ಆಗಸ್ಟ್ 13ರ ತಡರಾತ್ರಿ ಬಾಗ್ಸೆವಾನಿಯಾದ ಆಭರಣ ಮಳಿಗೆಯೊಂದಕ್ಕೆ ನುಗ್ಗಿ ನಗದು ಸೇರಿದಂತೆ ₹50 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು. ಪ್ರಕರಣ ಸಂಬಂಧ ಬಘೇಲ್, ರಾಯ್, ಇಬ್ಬರು ಮಹಿಳೆ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಅಮಿತ್ ತಿಳಿಸಿದ್ದಾರೆ.