ನವದೆಹಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಕಂತಿನ ಮೇಲೆ ವಿಧಿಸಿರುವ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿ ದೆಹಲಿಯ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು.
0
samarasasudhi
ಆಗಸ್ಟ್ 07, 2024
ನವದೆಹಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಕಂತಿನ ಮೇಲೆ ವಿಧಿಸಿರುವ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿ ದೆಹಲಿಯ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು.
ಟಿಎಂಸಿ, ಕಾಂಗ್ರೆಸ್, ಎಎಪಿ ಮತ್ತು ಎನ್‌ಸಿಪಿ (ಎಸ್‌ಸಿ) ಮತ್ತು ಇತರ ಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
'ತೆರಿಗೆ ಭಯೋತ್ಪಾದನೆ' ಎಂಬ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಜೀವ ವಿಮೆ ಮತ್ತು ಆರೋಗ್ಯ ವಿಮೆಗಳ ಕಂತಿನ ಮೇಲಿನ ತೆರಿಗೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಇಂದು ಸಂಸತ್ ಆವರಣದಲ್ಲಿ 'ಇಂಡಿಯಾ' ಪಕ್ಷಗಳು ಪ್ರತಿಭಟನೆ ನಡೆಸುವ ಮೂಲಕ ಜೀವ ವಿಮೆ ಹಾಗೂ ಆರೋಗ್ಯ ವಿಮೆಗಳ ಕಂತುಗಳ ಮೇಲಿನ ಶೇ 18ರಷ್ಟು ಜಿಎಸ್‌ಟಿಯನ್ನು ತಕ್ಷಣವೇ ತೆಗೆದುಹಾಕುವಂತೆ ಒತ್ತಾಯಿಸಿದವು. ಈ ಸುಲಿಗೆಯು ನಮ್ಮ ಜನರಿಗೆ ವಿಶೇಷವಾಗಿ ಮಧ್ಯಮ ವರ್ಗದವರಿಗೆ ತೀವ್ರ ಹೊಡೆತವಾಗಿದೆ. ಮೋದಿ ಸರ್ಕಾರದ ತೆರಿಗೆ ವಸೂಲಾತಿ ನೀತಿಗಳ ಹೊರೆಯಿಂದ ಮಧ್ಯಮ ವರ್ಗದವರು ಈಗಾಗಲೇ ಸಂಕಷ್ಟದಲ್ಲಿದ್ದಾರೆ' ಎಂದು ಅವರು ಹೇಳಿದ್ದಾರೆ.
'ಆರೋಗ್ಯ ಸಮಸ್ಯೆಗಳು ಉಂಟಾದಾಗ ಸಹಾಯಕ್ಕೆ ಬರಲಿ ಎಂಬ ಉದ್ದೇಶದಿಂದ ಸಣ್ಣ ಸಣ್ಣ ಹಣವನ್ನು ಉಳಿತಾಯ ಮಾಡಿ ಪ್ರತಿ ವರ್ಷ ವಿಮಾ ಕಂತುಗಳನ್ನು ಪಾವತಿಸುವ ದೇಶದ ಲಕ್ಷಾಂತರ ಜನರ ₹24,000 ಕೋಟಿಯನ್ನು ಮೋದಿ ಸರ್ಕಾರ ಸಂಗ್ರಹಿಸಿದೆ. ಜೀವ ಮತ್ತು ಆರೋಗ್ಯ ವಿಮೆಗಳನ್ನು ಜಿಎಸ್‌ಟಿ ಮುಕ್ತಗೊಳಿಸಬೇಕು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೀವ ಮತ್ತು ಆರೋಗ್ಯ ವಿಮಾ ಕಂತುಗಳ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವಂತೆ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು.