ನವದೆಹಲಿ: 'ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗಾಗಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್ ಪಕ್ಷವು ಸಿದ್ಧವಿದೆ' ಎಂದು ಪಕ್ಷದ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರೀಕ್ ಹಮೀದ್ ಕರ‍್ರ ಸೋಮವಾರ ಹೇಳಿದರು.
0
samarasasudhi
ಆಗಸ್ಟ್ 20, 2024
ನವದೆಹಲಿ: 'ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗಾಗಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಕಾಂಗ್ರೆಸ್ ಪಕ್ಷವು ಸಿದ್ಧವಿದೆ' ಎಂದು ಪಕ್ಷದ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾರೀಕ್ ಹಮೀದ್ ಕರ‍್ರ ಸೋಮವಾರ ಹೇಳಿದರು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 'ಈ ಬಾರಿಯ ಮೈತ್ರಿಯ ಮಾನದಂಡವು ಕಳೆದ ಲೋಕಸಭಾ ಚುನಾವಣೆಗಿಂತ ಭಿನ್ನವಾಗಿ ಇರಲಿದೆ' ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವುದು ಕಾಂಗ್ರೆಸ್ ಪಕ್ಷದ ಮುಖ್ಯ ಆದ್ಯತೆ. ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಮೂಲಕ ಕೇಂದ್ರ ಸರ್ಕಾರವು ಅಸಾಂವಿಧಾನಿಕ ಹೆಜ್ಜೆ ಇಟ್ಟಿದೆ ಎಂದು ದೂರಿದರು.
ಬಿಜೆಪಿಯ ಸರ್ವಾಧಿಕಾರಿ ಧೋರಣೆ ವಿರೋಧಿಸುವ ಎಲ್ಲ ಜಾತ್ಯತೀತ ಪಕ್ಷಗಳಿಗೆ ಈಗಾಗಲೇ ಸಂದೇಶ ರವಾನೆಯಾಗಿದೆ. ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರಾಡಳಿತ ಪ್ರದೇಶವನ್ನು ಮತದಾಳವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಲೋಕಸಭಾ ಚುನಾವಣೆ ಸಂದರ್ಭದಲ್ಲಾದ ಮೈತ್ರಿಗಿಂತ ಈ ಮೈತ್ರಿಯು ಭಿನ್ನವಾಗಿ ಇರಲಿದೆ. ಅದು ರಾಷ್ಟ್ರಮಟ್ಟದಲ್ಲಾದ ಮೈತ್ರಿ, ಇದು ವಿಧಾನಸಭಾ ಚುನಾವಣೆ. ಹೀಗಾಗಿ ಮೈತ್ರಿಯ ಮಾನದಂಡಗಳು ವಿಭಿನ್ನವಾಗಿ ಇರಲಿವೆ' ಎಂದು ಹೇಳಿದರು.
ತಾರೀಕ್ ಹಮೀದ್ ಅವರು 2017ರಲ್ಲಿ ಪಿಡಿಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಿಡಿಪಿ-ಬಿಜೆಪಿ ಮೈತ್ರಿಯನ್ನು ಟೀಕಿಸಿದವರಲ್ಲಿ ತಾರೀಕ್ ಹಮೀದ್ ಪ್ರಮುಖರು.