ನವದೆಹಲಿ: ರಷ್ಯಾ ಸೇನೆಯಲ್ಲಿದ್ದ ಎಂಟು ಮಂದಿ ಭಾರತೀಯರು ಉಕ್ರೇನ್‌ನೊಂದಿಗೆ ನಡೆದ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಗುರುವಾರ ಹೇಳಿದ್ದಾರೆ.
0
samarasasudhi
ಆಗಸ್ಟ್ 02, 2024
ನವದೆಹಲಿ: ರಷ್ಯಾ ಸೇನೆಯಲ್ಲಿದ್ದ ಎಂಟು ಮಂದಿ ಭಾರತೀಯರು ಉಕ್ರೇನ್‌ನೊಂದಿಗೆ ನಡೆದ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಮಾಹಿತಿಗಳ ಪ್ರಕಾರ ಭಾರತದ 12 ಮಂದಿ ಈಗಾಗಲೆ ರಷ್ಯಾ ಸೇನೆಯನ್ನು ತೊರೆದಿದ್ದಾರೆ.
ತಿಳಿದೋ, ತಿಳಿಯದೆಯೋ ರಷ್ಯಾ ಸೇನೆಗೆ ಸೇರಿದ್ದ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ಕೇಂದ್ರ ಸರ್ಕಾರವು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಈ ಸಂಬಂಧ ರಷ್ಯಾ ಸರ್ಕಾರದೊಂದಿಗೂ ನಿಕಟ ಸಂಪರ್ಕದಲ್ಲಿದ್ದು, ಅವರೆಲ್ಲರನ್ನು ಶೀಘ್ರವೇ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಕಳೆದ ತಿಂಗಳು ಭೇಟಿ ನೀಡಿದ್ದ ವೇಳೆ, ರಷ್ಯಾ ಸೇನೆಗೆ ಸೇರಿರುವ ಭಾರತೀಯರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದರು ಎಂದು ತಿಳಿಸಿದರು.
'ಯುದ್ಧದಲ್ಲಿ ಮಡಿದಿರುವ ಭಾರತೀಯರ ಕುಟುಂಬಗಳಿಗೆ ಒಪ್ಪಂದಗಳ ಅನ್ವಯ ಸೂಕ್ತ ಪರಿಹಾರ ನೀಡಲಾಗುವುದು' ಎಂದು ರಷ್ಯಾ ಸರ್ಕಾರ ಭರವಸೆ ನೀಡಿರುವುದಾಗಿ ಇದೇ ವೇಳೆ ಹೇಳಿದರು.