ಇಂದೋರ್: ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣ ಕಾಮಗಾರಿಯಿಂದ ಸರ್ಕಾರಕ್ಕೆ ಸುಮಾರು ₹400 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
0
samarasasudhi
ಸೆಪ್ಟೆಂಬರ್ 10, 2024
ಇಂದೋರ್: ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣ ಕಾಮಗಾರಿಯಿಂದ ಸರ್ಕಾರಕ್ಕೆ ಸುಮಾರು ₹400 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಇಂದೋರ್‌ನಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕವೇ ತೆರಿಗೆ ಸಂಗ್ರಹದ ಅಂಕಿಅಂಶ ತಿಳಿಯಲಿದೆ' ಎಂದು ಹೇಳಿದ್ದಾರೆ.
'ನನ್ನ ಅಂದಾಜಿನ ಪ್ರಕಾರ ರಾಮ ಮಂದಿರ ನಿರ್ಮಾಣ ಕಾಮಗಾರಿಯಿಂದ ಸರ್ಕಾರಕ್ಕೆ ಜಿಎಸ್‌ಟಿ ಮೂಲಕ ₹400 ಕೋಟಿ ಆದಾಯ ಬರಲಿದೆ. ಸುಮಾರು 70 ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಸಂಕೀರ್ಣದಲ್ಲಿ ಒಟ್ಟು 18 ದೇವಾಲಯಗಳನ್ನು ನಿರ್ಮಿಸಲಾಗುವುದು. ಇದು ಶಿವ ಮಂದಿರ, ಮಹರ್ಷಿ ವಾಲ್ಮೀಕಿ, ಶಬರಿ ಮತ್ತು ತುಳಸಿದಾಸರ ದೇವಾಲಯಗಳನ್ನು ಒಳಗೊಂಡಿರುತ್ತದೆ. ಸರ್ಕಾರಕ್ಕೆ ಒಂದು ರೂಪಾಯಿ ಕಡಿಮೆಯಾಗದಂತೆ ಶೇ 100ರಷ್ಟು ತೆರಿಗೆಯನ್ನು ಪಾವತಿಸುತ್ತೇವೆ' ಎಂದಿದ್ದಾರೆ.
'ಸಾರ್ವಜನಿಕರ ಸಹಕಾರದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ನಿತ್ಯ ಎರಡು ಲಕ್ಷ ಭಕ್ತರು ಬಂದರೂ ಯಾರಿಗೂ ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದು ವಿಶ್ವಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಚಂಪತ್ ರಾಯ್ ಹೇಳಿದ್ದಾರೆ.
'ರಾಮ ಮಂದಿರ ನಿರ್ಮಿಸಲು ಒತ್ತಾಯಿಸಿ ನಡೆದ ಚಳವಳಿಯ ಸಂದರ್ಭದಲ್ಲಿ ಎಷ್ಟು ಜನರು, ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ನೋವು ಅನುಭವಿಸಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಈ ಆಂದೋಲನವು ಸ್ವಾತಂತ್ರ್ಯಕ್ಕಾಗಿ 1,000 ವರ್ಷಗಳ ಹಿಂದಿನ ಹೋರಾಟಕ್ಕಿಂತ ಕಡಿಮೆಯಿಲ್ಲ. ಇದು ಜನಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಆಂದೋಲನವಾಗಿದೆ' ಎಂದು ಅವರು ತಿಳಿಸಿದ್ದಾರೆ.