ಕೋಲ್ಕತ್ತ: ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸೋಮವಾರ 10ನೇ ದಿನಕ್ಕೆ ಕಾಲಿರಿಸಿದೆ.
0
samarasasudhi
ಅಕ್ಟೋಬರ್ 15, 2024
ಕೋಲ್ಕತ್ತ: ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸೋಮವಾರ 10ನೇ ದಿನಕ್ಕೆ ಕಾಲಿರಿಸಿದೆ.
ಉಪವಾಸ ನಿರತ ವೈದ್ಯರಲ್ಲಿ ಮತ್ತಿಬ್ಬರ ಆರೋಗ್ಯ ಹದಗೆಟ್ಟಿದ್ದು, ಅವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪವಾಸನಿರತ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯ ಪುಲಾಸ್ತ ಆಚಾರ್ಯ ಅವರ ಆರೋಗ್ಯ ಹದಗೆಟ್ಟಿದ್ದು, ಭಾನುವಾರ ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿದೆ.
'ಪುಲಾಸ್ತ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ನಾವು ವೈದ್ಯರ ಗುಂಪು ರಚಿಸಿದ್ದೇವೆ' ಎಂದು ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ತಿಳಿಸಿದ್ದಾರೆ.
'ತಾನ್ಯ ಪಾಂಜಾ ಎಂಬ ಮತ್ತೊಬ್ಬ ಕಿರಿಯ ವೈದ್ಯೆಯ ಆರೋಗ್ಯ ಕೂಡ ಸೋಮವಾರ ಮಧ್ಯಾಹ್ನ ಹದಗೆಟ್ಟಿದೆ. ಆಕೆಯ ದೇಹ ಸ್ಥಿತಿ ಸ್ಥಿರವಾಗಿದ್ದು, ಧರಣಿ ನಿರತ ಸ್ಥಳದಲ್ಲೇ ಆಕೆಯ ಬಗ್ಗೆ ನಿಗಾವಹಿಸಲಾಗಿದೆ,' ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಸಮಾವೇಶ ರದ್ದತಿಗೆ ಮನವಿ: ರಾಜ್ಯದಲ್ಲಿ ಅ.15ರಂದು 'ದುರ್ಗಾ ಪೂಜಾ ಮಹೋತ್ಸವ' ಇದೆ. ಆದರೆ, ಅದೇ ದಿನ ವೈದ್ಯರು ಸಮಾವೇಶ ಹಮ್ಮಿಕೊಂಡಿದ್ದಾರೆ. ಪೂಜಾ ಮಹೋತ್ಸವದ ಹಿನ್ನೆಲೆಯಲ್ಲಿ ಸಮಾವೇಶ ರದ್ದುಗೊಳಿಸಬೇಕೆಂದು ವೈದ್ಯರ ಜಂಟಿ ವೇದಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಆಗ್ರಹಿಸಿದ್ದಾರೆ.
ಆದರೆ, ಪಂತ್ ಅವರ ಈ ಆಗ್ರಹಕ್ಕೆ ವೈದ್ಯರ ಜಂಟಿ ವೇದಿಕೆ ಬೇಸರ ವ್ಯಕ್ತಪಡಿಸಿದೆ. ಕಿರಿಯ ವೈದ್ಯರು ಆಮರಣಾಂತ ಉಪವಾಸ ಮಾಡುತ್ತಿದ್ದರೂ ಸರ್ಕಾರ ಹಬ್ಬದ ಆಚರಣೆಗೆ ಆದ್ಯತೆ ನೀಡಿದೆ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.