ದೇರ್ ಅಲ್ -ಬಲಾಹ್ : ಗಾಜಾ ಪಟ್ಟಿಯಲ್ಲಿ ನಿರಾಶ್ರಿತರಾದವರು ಆಶ್ರಯ ಪಡೆದಿದ್ದ ಶಾಲಾ ಕಟ್ಟಡದ ಮೇಲೆ ಇಸ್ರೇಲ್ ಗುರುವಾರ ನಡೆಸಿರುವ ವಾಯು ದಾಳಿಯಲ್ಲಿ 27 ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಾಧಿಕಾರಿಗಳು ಹೇಳಿದ್ದಾರೆ.
0
samarasasudhi
ಅಕ್ಟೋಬರ್ 11, 2024
ದೇರ್ ಅಲ್ -ಬಲಾಹ್ : ಗಾಜಾ ಪಟ್ಟಿಯಲ್ಲಿ ನಿರಾಶ್ರಿತರಾದವರು ಆಶ್ರಯ ಪಡೆದಿದ್ದ ಶಾಲಾ ಕಟ್ಟಡದ ಮೇಲೆ ಇಸ್ರೇಲ್ ಗುರುವಾರ ನಡೆಸಿರುವ ವಾಯು ದಾಳಿಯಲ್ಲಿ 27 ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ದೇರ್ ಅಲ್- ಬಲಾಹ್‌ನಲ್ಲಿನ ಕೇಂದ್ರ ಪಟ್ಟಣದ ಮೇಲೆ ನಡೆದಿರುವ ವಾಯು ದಾಳಿಯಲ್ಲಿ ಹತರಾದ 27 ಜನರ ಶವಗಳನ್ನು ಅಲ್ ಅಖ್ಸಾ ಹುತಾತ್ಮರ ಆಸ್ಪತ್ರೆಗೆ ತರಲಾಗಿದೆ.
ಶಾಲೆಯೊಳಗೆ ಕಾರ್ಯಾಚರಿಸುತ್ತಿದ್ದ ಬಂಡುಕೋರರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಗುರಿಯಾಗಿಸಿ ನಿಖರ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಗಾಜಾದಲ್ಲಿ ಆಶ್ರಯ ತಾಣಗಳಾಗಿ ಮಾರ್ಪಟ್ಟ ಶಾಲೆಗಳ ಮೇಲೆ ಇಸ್ರೇಲ್ ಪದೇ ಪದೇ ದಾಳಿ ನಡೆಸುತ್ತಿದ್ದು, ಅವುಗಳಲ್ಲಿ ಬಂಡುಕೋರರು ಅಡಗಿಕೊಂಡಿದ್ದಾರೆ ಎಂದು ಅದು ಆರೋಪಿಸಿದೆ. ಆದರೆ, ಇದಕ್ಕೆ ಅದು ಸಾಕ್ಷ್ಯಗಳನ್ನು ಒದಗಿಸಿಲ್ಲ.
'ಭದ್ರತೆ ಒದಗಿಸುವ ಹಮಾಸ್ ಆಡಳಿತದ ಪೊಲೀಸರು ಬಳಸುವ ಕೊಠಡಿಯಲ್ಲಿ ಶಾಲಾ ವ್ಯವಸ್ಥಾಪಕರು ಪರಿಹಾರ ನೆರವು ಕಾರ್ಯಾಚರಣೆಯ ಗುಂಪಿನ ಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಿದ್ದಾಗ ದಾಳಿ ನಡೆಸಲಾಗಿದೆ. ದಾಳಿಯಾದಾಗ ಶಾಲಾ ಕೊಠಡಿಯಲ್ಲಿ ಹಮಾಸ್‌ನ ಪೊಲೀಸರು ಇರಲಿಲ್ಲ' ಎಂದು ಭದ್ರತೆಯ ಕಾರಣಕ್ಕೆ ಹೆಸರು ಬಹಿರಂಗಪಡಿಸದ ಅನಾಮಧೆಯ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರ ವಿರುದ್ಧದ ತನ್ನ ಯುದ್ಧ ಮತ್ತು ಇರಾನ್‌ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ ಇಸ್ರೇಲ್, ಪ್ಯಾಲೆಸ್ಟೀನ್‌ನ ಜನವಸತಿಗಳಾದ್ಯಂತ ಬಂಡುಕೋರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ವಾಯು ದಾಳಿ ಮುಂದುವರೆಸಿದೆ. ಈ ವಾರದ ಆರಂಭದಿಂದಲೂ ಉತ್ತರ ಗಾಜಾದಲ್ಲಿ ಹಮಾಸ್ ಬಂಡುಕೋರರ ವಿರುದ್ಧ ಭಾರಿ ಪ್ರಮಾಣದಲ್ಲಿ ವಾಯು ಮತ್ತು ಭೂ ದಾಳಿಯನ್ನು ನಡೆಸುತ್ತಿದೆ.