ಮೆಲ್ಬರ್ನ್: 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ ಬೆಂಬಲ ಸೂಚಿಸಿವೆ.
0
samarasasudhi
ನವೆಂಬರ್ 09, 2024
ಮೆಲ್ಬರ್ನ್: 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ ಬೆಂಬಲ ಸೂಚಿಸಿವೆ.
ದೇಶದ ಎಂಟು ಪ್ರಾಂತ್ಯಗಳ ನಾಯಕರೊಂದಿಗೆ ಪ್ರಧಾನಿ ಆಯಂಟೊನಿ ಅಲ್ಬನೀಸ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.
ವಯೋಮಿತಿಯನ್ನು 14 ಅಥವಾ 16ಕ್ಕೆ ನಿಗದಿಪಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಾಗ ತಸ್ಮಾನಿಯಾ ರಾಜ್ಯವು ವಯೋಮಿತಿಯನ್ನು 14ಕ್ಕೆ ನಿಗದಿಪಡಿಸಿ ಎಂಬ ಸಲಹೆ ನೀಡಿತ್ತು. ಆದರೆ, ದೇಶದಲ್ಲಿ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎನ್ನುವ ಉದ್ದೇಶದಿಂದ ಈ ಸಲಹೆಯನ್ನು ನಿರಾಕರಿಸಲಾಗಿತ್ತು.
ಆಸ್ಟ್ರೇಲಿಯಾದ ಮುಖ್ಯ ವಿರೋಧ ಪಕ್ಷವು ಈಗಾಗಲೇ ಈ ಕ್ರಮವನ್ನು ಬೆಂಬಲಿಸಿದೆ. ಆದರೆ, ಗ್ರೀನ್ಸ್ ಪಕ್ಷ ಮಾತ್ರ ಇದನ್ನು ವಿರೋಧಿಸಿದೆ. 'ಇಂಥ ಕ್ರಮಗಳಿಂದ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅಂತಹವರು ನಮ್ಮ ನೆಲದಲ್ಲಿ ಹುಟ್ಟುವುದಕ್ಕೇ ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
ಮಾನಸಿಕ ಆರೋಗ್ಯ ವೈದ್ಯರು, ತಜ್ಞರು ಕೂಡ ಈ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ, ಪ್ರಮುಖ ವಿರೋಧ ಪಕ್ಷವು ಈ ಕ್ರಮವನ್ನು ಬೆಂಬಲಿಸಿರುವುದರಿಂದ ಸಂಸತ್ತಿನಲ್ಲಿ ಈ ಕುರಿತ ಮಸೂದೆಯು ಸುಲಭವಾಗಿ ಪಾಸಾಗಲಿದೆ ಎನ್ನಲಾಗುತ್ತಿದೆ.