ಇಂಫಾಲ: ಜಿರೀಬಾಮ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಾಪತ್ತೆಯಾಗಿರುವ 6 ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದ್ದು, ಮೇಲ್ವಿಚಾರಣೆಗಾಗಿ ಮಣಿಪುರ ಪೊಲೀಸ್‌ನ ಹಿರಿಯ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
0
samarasasudhi
ನವೆಂಬರ್ 15, 2024
ಇಂಫಾಲ: ಜಿರೀಬಾಮ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಾಪತ್ತೆಯಾಗಿರುವ 6 ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದ್ದು, ಮೇಲ್ವಿಚಾರಣೆಗಾಗಿ ಮಣಿಪುರ ಪೊಲೀಸ್‌ನ ಹಿರಿಯ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಂಘರ್ಷ ಪೀಡಿತ ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಸೋಮವಾರ ಶಂಕಿತ ಹಮರ್ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ 10 ಶಂಕಿತ ಉಗ್ರರು ಹತರಾಗಿದ್ದರು. ಈ ವೇಳೆ ಕಾಳಜಿ ಕೇಂದ್ರದಲ್ಲಿದ್ದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದರು.
ಬೊರೊಬೆಕ್ರಾ ಪೊಲೀಸ್ ಠಾಣೆಯ ಆವರಣದಲ್ಲಿದ್ದ ಕೇಂದ್ರದಲ್ಲಿ ಇವರು(ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು) ವಾಸವಿದ್ದರು. ಉಗ್ರರು ಅವರನ್ನು ಅಪಹರಿಸಿದ್ದಾರೆ ಎಂದು ಇಂಫಾಲ್ ಕಣಿವೆ ಮೂಲದ ನಾಗರಿಕ ಸಮಾಜ ಸಂಘಟನೆಗಳು ಎಂದು ಆರೋಪಿಸಿವೆ.
ನಾಪತ್ತೆಯಾದವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ರಾತ್ರಿ ಇಂಫಾಲ್ ಮತ್ತು ಜಿರೀಬಾಮ್‌ನಲ್ಲಿ ಮುಂಬತ್ತಿ ಮೆರವಣಿಗೆ ನಡೆಸಲಾಯಿತು. ನಾಪತ್ತೆಯಾದವರ ಪತ್ತೆಗೆ ಶಾಸಕರು ಸೇರಿದಂತೆ ಸ್ಥಳೀಯ ರಾಜಕಾರಣಿಗಳು ಮುತುವರ್ಜಿ ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಮೈತೇಯಿ -ಕುಕಿ ಜೊ ಸಂಘರ್ಷ ಶುರುವಾಗಿದ್ದು, ಈವರೆಗೆ ಸುಮಾರು 240 ಜನರು ಮೃತಪಟ್ಟಿದ್ದಾರೆ. 60,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸೇನೆ ಸಹಿತ ಹೆಚ್ಚಿನ ಭದ್ರತಾ ಪಡೆಗಳ ಉಪಸ್ಥಿತಿ ನಡುವೆಯೂ ಅಲ್ಲಲ್ಲಿ ಹಿಂಸಾಚಾರ ಮುಂದುವರಿದಿದೆ.