ರಾಂಚಿ: ಬಾಂಗ್ಲಾದೇಶದಿಂದ ಒಳನುಸುಳುವಿಕೆಯ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಶೋಧ ಕಾರ್ಯಾಚರಣೆ ವೇಳೆ ಜಾರಿ ನಿರ್ದೇಶನಾಲಯವು (ಇ.ಡಿ) ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
0
samarasasudhi
ನವೆಂಬರ್ 14, 2024
ರಾಂಚಿ: ಬಾಂಗ್ಲಾದೇಶದಿಂದ ಒಳನುಸುಳುವಿಕೆಯ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಶೋಧ ಕಾರ್ಯಾಚರಣೆ ವೇಳೆ ಜಾರಿ ನಿರ್ದೇಶನಾಲಯವು (ಇ.ಡಿ) ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಬಾಂಗ್ಲಾದ ರೋನಿ ಮಂಡಾಲ್, ಸಮೀರ್ ಚೌಧರಿ ಹಾಗೂ ಭಾರತೀಯ ಪಿಂಟು ಹಲ್ದಾರ್ ಅವರನ್ನು ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಿಂಕಿ ಬಸು ಮುಖರ್ಜಿ ಎಂಬ ಮಹಿಳಾ ಆರೋಪಿಯನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ತನಿಖೆಯ ಭಾಗವಾಗಿ ಮಂಗಳವಾರ ಜಾರ್ಖಂಡ್ ಹಾಗೂ ನೆರೆಯ ಎರಡು ರಾಜ್ಯಗಳಲ್ಲಿ ಒಟ್ಟು 17 ಸ್ಥಳಗಳಲ್ಲಿ ಇ.ಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ನಕಲಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಸ್ಥಿರ ಆಸ್ತಿ ದಾಖಲೆಗಳು, ನಗದು ಹಾಗೂ ಆಭರಣ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದೆ.
ಜಾರ್ಖಂಡ್‌ನ ಜೆಎಂಎಂ ಸರ್ಕಾರವು ಒಳನುಸುಳುಕೋರರಿಗೆ ಹಾಗೂ ಮಾನವ ಕಳ್ಳಸಾಗಣೆಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಬಾಂಗ್ಲಾದೇಶದವರ ಒಳನುಸುಳುವಿಕೆ ಕುರಿತು ಬಿಜೆಪಿಯ ಪ್ರತಿಪಾದನೆಯನ್ನು ಬೆಂಬಲಿಸುವುದೇ ಇ.ಡಿ ದಾಳಿಯ ಉದ್ದೇಶವಾಗಿದೆ. ಬಿಜೆಪಿಯ ಆರೋಪವನ್ನು ಸತ್ಯ ಎಂದು ಬಿಂಬಿಸಲು ದಾಳಿ ನಡೆಸಲಾಗುತ್ತಿದೆ. ಇ.ಡಿ ದಾಳಿಯ ಉದ್ದೇಶ ಬಾಂಗ್ಲಾದೇಶದ ನುಸುಳುಕೋರರ ವಿರುದ್ಧವಲ್ಲ. ಬಿಜೆಪಿಯ ರಾಜಕೀಯ ನೆಲೆ ಭದ್ರಪಡಿಸುವುದೇ ಆಗಿದೆ ಎಂದು ಜೆಎಂಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿವೆ.