ಕೋಲ್ಕತ್ತ: ಕೇಂದ್ರದ ಉದ್ದೇಶಿತ 2024ರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ನಿರ್ಣಯ ಮಂಡಿಸುವ ಸಾಧ್ಯತೆಯಿದೆ.
ನ.25ರಂದು ಪ್ರಾರಂಭವಾಗುವ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ಮಂಡಿಸುವ ಸಾಧ್ಯತೆಯಿದೆ.
ಕೇಂದ್ರದ ಈ ಕ್ರಮವು ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿಯುವ ಮತ್ತು ಅಲ್ಪ ಸಂಖ್ಯಾತರನ್ನು ಇನ್ನಷ್ಟು ಕಡೆಗಣಿಸುವ ಕ್ರಮವಾಗಿದೆ ಎಂದು ಟಿಎಂಸಿ ಆರೋಪಿಸಿದೆ.
ವಕ್ಫ್ ವಿಷಯಗಳಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವನ್ನು ನಿರ್ಣಯ ಹೊಂದಿದೆ ಎಂದು ವಿಧಾನಸಭೆ ಮೂಲಗಳು ತಿಳಿಸಿವೆ.
ಕೇಂದ್ರದ ವಕ್ಫ್ (ತಿದ್ದುಪಡಿ) ಮಸೂದೆಯು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಮಸೂದೆಯು ವಕ್ಫ್ ಆಸ್ತಿಗಳ ಮೇಲೆ ಕೇಂದ್ರೀಕೃತ ನಿಯಂತ್ರಣ ಹೊಂದುವ ಹಾಗೂ ರಾಜ್ಯದ ಹಕ್ಕುಗಳು ಮತ್ತು ಸಮುದಾಯದ ಸಾರ್ವಭೌಮತ್ವವನ್ನು ಕಡೆಗಣಿಸುವ ಕ್ರಮವಾಗಿದೆ ಎಂದು ವಿರೋಧ ಪಕ್ಷಗಳು ಹಾಗೂ ಅಲ್ಪ ಸಂಖ್ಯಾತರ ಸಂಘಟನೆಗಳು ಆರೋಪಿಸಿವೆ.




