ಮಧ್ಯಪ್ರದೇಶ :ಉಮರಿಯ: ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಣಾ ಮೀಸಲು ಅರಣ್ಯದಲ್ಲಿ (ಬಿಟಿಆರ್) ಇನ್ನೂ ಎರಡು ಆನೆಗಳು ಮೃತಪಟ್ಟಿವೆ. ಇದರೊಂದಿಗೆ ಮೃತಪಟ್ಟ ಆನೆಗಳ ಒಟ್ಟು ಸಂಖ್ಯೆ 9ಕ್ಕೆ ಏರಿದೆ. ಮತ್ತೊಂದು ಆನೆಯ ಸ್ಥಿತಿ ಗಂಭೀರವಾಗಿದೆ.
0
samarasasudhi
ನವೆಂಬರ್ 01, 2024
ಮಧ್ಯಪ್ರದೇಶ :ಉಮರಿಯ: ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಣಾ ಮೀಸಲು ಅರಣ್ಯದಲ್ಲಿ (ಬಿಟಿಆರ್) ಇನ್ನೂ ಎರಡು ಆನೆಗಳು ಮೃತಪಟ್ಟಿವೆ. ಇದರೊಂದಿಗೆ ಮೃತಪಟ್ಟ ಆನೆಗಳ ಒಟ್ಟು ಸಂಖ್ಯೆ 9ಕ್ಕೆ ಏರಿದೆ. ಮತ್ತೊಂದು ಆನೆಯ ಸ್ಥಿತಿ ಗಂಭೀರವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಯೊಬ್ಬರು, 'ಬುಧವಾರ ಒಂದು, ಗುರುವಾರ ಬೆಳಿಗ್ಗೆ ಮತ್ತೊಂದು ಆನೆ ಮೃತಪಟ್ಟಿತು. ಎಂಟು ಆನೆಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ' ಎಂದರು.
ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಲ್.ಕೃಷ್ಣಮೂರ್ತಿ ಅವರು, 'ವೈದ್ಯರು ಕಳೇಬರಗಳ ಪರೀಕ್ಷೆ ನಡೆಸಿದ್ದಾರೆ. ಮೃತ ಆನೆಗಳ ಹೊಟ್ಟೆಯಲ್ಲಿ ವಿಷಯುಕ್ತ ಅಂಶಗಳು, ಹಾರಕ ಸಿರಿಧಾನ್ಯ (ಕೋದೊ ಮಿಲೆಟ್) ಕಂಡುಬಂದಿದೆ' ಎಂದು ತಿಳಿಸಿದರು.
ಆನೆಗಳ ಸಾವಿನ ತನಿಖೆಗೆ ಸರ್ಕಾರ ಕೃಷ್ಣಮೂರ್ತಿ ಅವರ ನೇತೃತ್ವದಲ್ಲೇ ಸಮಿತಿಯನ್ನು ರಚಿಸಿದೆ.
'ಕೋತಿಗಳು ಹೆಚ್ಚಾಗಿ ಹಾರಕ ಸಿರಿಧಾನ್ಯವನ್ನೇ ತಿನ್ನುತ್ತವೆ. ಆದರೆ ಸತ್ತಿರುವ ನಿದರ್ಶನವಿಲ್ಲ' ಎಂದು ಅವರ ಗಮನಸೆಳೆದಾಗ, 'ಆನೆಗಳ ಕಳೇಬರದ ಮಾದರಿಯನ್ನು ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ವಿಧಿವಿಜ್ಞಾನ ಪರೀಕ್ಷೆ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ' ಎಂದರು.