ತಿರುವನಂತಪುರ : ವಯನಾಡ್ ಜಿಲ್ಲೆಯ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ಜು.30ರಂದು ಸಂಭವಿಸಿದ್ದ, ಕೇರಳದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ತಿಳಿಸಿದೆ.
ವಯನಾಡ್ ಜಿಲ್ಲೆಯಲ್ಲಿ ಭೂಕುಸಿತಗಳಿಂದಾಗಿ ಕೇರಳಕ್ಕೆ 1,200 ಕೋಟಿ ರೂ.ಗೂ ಅಧಿಕ ನಷ್ಟವುಂಟಾಗಿದ್ದು, 420ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಭೂಕುಸಿತಗಳು ಸಂಭವಿಸಿದ ವಾರದೊಳಗೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇರಳ ಸರಕಾರವು ಕೋರಿಕೊಂಡಿತ್ತು. ವಯನಾಡು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರೂ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಸಂಸತ್ತಿನಲ್ಲಿ ಮನವಿ ಮಾಡಿಕೊಂಡಿದ್ದರು.
2013ರಲ್ಲಿ ಆಗಿನ ಯುಪಿಎ ಸರಕಾರದಲ್ಲಿ ಸಹಾಯಕ ಗೃಹಸಚಿವರಾಗಿದ್ದ ಎಂ.ರಾಮಚಂದ್ರನ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಉತ್ತರದಲ್ಲಿ, ನೈಸರ್ಗಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು. ರಾಮಚಂದ್ರನ್ ಕೇರಳದ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಓರ್ವರಾಗಿದ್ದಾರೆ.
ಈ ವಿಷಯ ಈಗಾಗಲೇ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಗಮನಾರ್ಹವಾಗಿ, ಭೂಕುಸಿತಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಯಾವುದೇ ನಿಬಂಧನೆ ಅಸ್ತಿತ್ವದಲ್ಲಿಲ್ಲ ಎನ್ನುವುದು ಗೊತ್ತಿದ್ದರೂ ಅದಕ್ಕಾಗಿ ಪದೇ ಪದೇ ವಿನಂತಿಸುವ ಮೂಲಕ ಯುಡಿಎಫ್ ಮತ್ತು ಎಲ್‌ಡಿಎಫ್ ರಾಜಕೀಯವನ್ನು ಮಾಡುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.
ಈ ನಡುವೆ ರಾಜ್ಯದ ಎಲ್‌ಡಿಎಫ್ ನೇತೃತ್ವದ ಸರಕಾರದ ವಿರುದ್ಧ ದಾಳಿ ನಡೆಸಿರುವ ಯುಡಿಎಫ್ ನಾಯಕರು,ರಾಜ್ಯ ಸರಕಾರದಲ್ಲಿ ಉತ್ಸಾಹದ ಕೊರತೆಯು ಅದು ಕೇಂದ್ರದಿಂದ ಆರ್ಥಿಕ ನೆರವು ಕೋರುವುದನ್ನು ತಡೆದಿದೆ ಹೇಳಿದ್ದಾರೆ.



