ಎರ್ನಾಕುಳಂ: ಎನ್‍ಸಿಸಿ 21 ಕೇರಳ ಬೆಟಾಲಿಯನ್ ಶಿಬಿರದಲ್ಲಿ ವಿಷಾಹಾರ ಸೇವನೆಯಿಂದ ಸುಮಾರು 100 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತ್ರಿಕಕ್ಕರ ಕೆಎಂಎಂ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದೆ. ಮೊನ್ನೆ ಮಧ್ಯಾಹ್ನದ ಊಟದ ನಂತರ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಶಿಬಿರದಲ್ಲಿ ವಿತರಿಸಲಾದ ಆಹಾರ ಹಳಸಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆ ಬಳಿಕ ಪೋಷಕರು ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಮಾಹಿತಿ ತಿಳಿದ ಪೋಷಕರು ಹಾಗೂ ಶಿಕ್ಷಕರು ಕಾಲೇಜಿಗೆ ಆಗಮಿಸಿದ್ದರು. ಆದರೆ ಶಿಬಿರದ ಸ್ಥಳಕ್ಕೆ ಪೋಷಕರು ಪ್ರವೇಶಿಸಲು ಅವಕಾಶ ನೀಡಲಿಲ್ಲ, ಇದು ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಪೋಷಕರು ಹಾಗೂ ಪೆÇಲೀಸರ ನಡುವೆ ವಾಗ್ವಾದ ನಡೆದಿದೆ. ನಂತರ ಶಿಬಿರ ಮುಕ್ತಾಯವಾಯಿತು.
ಮಧ್ಯಾಹ್ನದಿಂದಲೇ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಸಂಜೆ ವೇಳೆಗೆ ಕೆಲ ವಿದ್ಯಾರ್ಥಿಗಳು ಕುಸಿದು ಬಿದ್ದರು. ವಿದ್ಯಾರ್ಥಿಗಳನ್ನು ಪೋಲೀಸ್ ವಾಹನಗಳು ಮತ್ತು ಆಂಬ್ಯುಲೆನ್ಸ್‍ಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಡಿಎಂಒ ಹಾಗೂ ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆ. ಪೋಲೀಸರು ತನಿಖೆ ಆರಂಭಿಸಿದ್ದಾರೆ. ಆಹಾರ ವಿಷಬಾಧೆಗೊಳಗಾದ ಪೀಡಿತ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





