HEALTH TIPS

ದೆಹಲಿ: 101 ವರ್ಷಗಳ ದಾಖಲೆ ಮುರಿದ ಮಳೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಸುರಿದ ಭಾರಿ ಮಳೆ 101 ವರ್ಷಗಳ ದಾಖಲೆಯನ್ನೇ ಮುರಿದಿದ್ದು, ಈ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೌದು.. ದೆಹಲಿಯಲ್ಲಿ ಶನಿವಾರ ಬೆಳಗ್ಗೆ 8.30 ರವರೆಗೆ ಭಾರಿ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 41.2 ಮಿಮೀ ಮಳೆಯಾಗಿದೆ. ಇದು ಡಿಸೆಂಬರ್‌ನಲ್ಲಿ ಕಳೆದ 101 ವರ್ಷಗಳಲ್ಲಿ ಸುರಿದ ಒಂದು ದಿನದ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಡಿಸೆಂಬರ್ 3 ರಂದು ಒಂದೇ ದಿನದಲ್ಲಿ 75.7 ಮಿಮೀ ಮಳೆಯಾಗಿತ್ತು. 1901 ರಲ್ಲಿ ಮಳೆ ಪ್ರಮಾಣದ ದಾಖಲೆಗಳ ಸಂಗ್ರಹ ಪ್ರಾರಂಭವಾದಾಗಿನಿಂದ ಡಿಸೆಂಬರ್ 2024 ರ ಮಳೆಯು ಮಾಸಿಕ ಮಳೆಯ ವಿಷಯದಲ್ಲಿ ಐದನೇ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಸಫ್ದರ್ಜಂಗ್‌ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಇದು 1901 ರ ನಂತರ ಸಫ್ದರ್ಜಂಗ್‌ನಲ್ಲಿ ಸುರಿದ ಎರಡನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿದೆ. ಏತನ್ಮಧ್ಯೆ, ಶನಿವಾರ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆಯು ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಿದ್ದೆ. ಅಂತೆಯೇ ಹಳದಿ ಅಲರ್ಟ್ ಅನ್ನೂ ಸಹ ಹೊರಡಿಸಿದೆ.

ಪಶ್ಚಿಮದ ಸಕ್ರಿಯ ವಾಯುಭಾರ ಕುಸಿತದ ಪರಿಣಾಮ ದೆಹಲಿ-ಎನ್‌ಸಿಆರ್ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತೆಯೇ ಶನಿವಾರ ಕನಿಷ್ಠ ತಾಪಮಾನವು 12.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುವಿನ ಸರಾಸರಿಗಿಂತ ಆರು ಡಿಗ್ರಿ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.

ಗಾಳಿ ಗುಣಮಟ್ಟ ಸುಧಾರಣೆ

ಇನ್ನು ದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕೊಂಚ ಮಟ್ಟಿಗೆ ಸುಧಾರಿಸಿದೆ. ಗರಿಷ್ಠ ಪ್ರಮಾಣದಲ್ಲಿದ್ದ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು 'ಮಧ್ಯಮ'ಕ್ಕೆ ಸುಧಾರಿಸಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಎಕ್ಯೂಐ 152 ಕ್ಕೆ ಇಳಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿ ತಿಳಿಸಿದೆ.

0 ಮತ್ತು 50 ರ ನಡುವಿನ ಎಕ್ಯೂಐ ಅನ್ನು 'ಉತ್ತಮ', 51 ಮತ್ತು 100 'ತೃಪ್ತಿಕರ', 101 ಮತ್ತು 200 'ಮಧ್ಯಮ', 201 ಮತ್ತು 300 'ಕಳಪೆ', 301 ಮತ್ತು 400 'ತುಂಬಾ ಕಳಪೆ' ಮತ್ತು 401 ಮತ್ತು 500 'ಗಂಭೀರ' ಎಂದು ಪರಿಗಣಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries