ನವದೆಹಲಿ: 2023-24ರ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ಸಾಮಗ್ರಿಗಳ ರಫ್ತು ಪ್ರಮಾಣ ದಾಖಲೆಯ ₹21,083 ಕೋಟಿಗೆ(2.63 ಬಿಲಿಯನ್ ಡಾಲರ್) ಏರಿಕೆಯಾಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ₹15,920 ಕೋಟಿಯಷ್ಟಿದ್ದ ರಫ್ತು ಪ್ರಮಾಣ ಶೇ 32.5ರಷ್ಟು ಏರಿಕೆ ಕಂಡಿದೆ.
2013-14ರ ಹಣಕಾಸು ವರ್ಷದಿಂದ ಕಳೆದ ಹತ್ತು ವರ್ಷಗಳಲ್ಲಿ ರಕ್ಷಣಾ ಸಾಮಗ್ರಿಗಳ ರಫ್ತು 31 ಪಟ್ಟು ಹೆಚ್ಚಳವಾಗಿದೆ.
ಖಾಸಗಿ ವಲಯ ಮತ್ತು ಡಿಪಿಎಸ್‌ಯುಗಳು ಸೇರಿದಂತೆ ರಕ್ಷಣಾ ಉದ್ಯಮವು ಪ್ರಚಂಡ ಪ್ರಗತಿ ಸಾಧಿಸಿದೆ ಎಂದು ಅದು ತಿಳಿಸಿದೆ.
ರಕ್ಷಣಾ ಸಾಮಗ್ರಿಗಳ ರಫ್ತುವಿನಲ್ಲಿ ಖಾಸಗಿ ವಲಯ ಮತ್ತು ಡಿಪಿಎಸ್‌ಯುಗಳು ಕ್ರಮವಾಗಿ ಶೇ 60 ಮತ್ತು ಶೇ 40ರಷ್ಟು ಕೊಡುಗೆ ನೀಡಿವೆ ಎಂದು ರಕ್ಷಣಾ ಸಚಿವಾಲಯವು ತನ್ನ ವರ್ಷಾಂತ್ಯದ ವರದಿಯಲ್ಲಿ ತಿಳಿಸಿದೆ.
2029ರ ವೇಳೆಗೆ ₹50,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುವ ಗುರಿಯನ್ನು ತಲುಪಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಅದು ಹೇಳಿದೆ.
ರಕ್ಷಣಾ ಸಚಿವಾಲಯದಲ್ಲಿ ಆತ್ಮನಿರ್ಭರತ್ವವನ್ನು ಹೆಚ್ಚಿಸಲು ಮತ್ತು ಆಮದುಗಳನ್ನು ಕಡಿಮೆ ಮಾಡಲು ಜುಲೈನಲ್ಲಿ ರಕ್ಷಣಾ ಉತ್ಪಾದನಾ ಇಲಾಖೆಯು 346 ಉತ್ಪನ್ನಗಳನ್ನು ಒಳಗೊಂಡಿರುವ ಐದನೇ ಧನಾತ್ಮಕ ಸ್ವದೇಶೀಕರಣ ಪಟ್ಟಿಯನ್ನು (ಪಿಐಎಲ್) ಸಿದ್ಧಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.





