ನವದೆಹಲಿ: ತನ್ನ ಅಡಿಯಲ್ಲಿ ಬರುವ ಶಾಲೆಗಳಲ್ಲಿ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ 'ಅನುತ್ತೀರ್ಣ ರಹಿತ ನೀತಿ'ಯನ್ನು(ಟಿo-ಜeಣeಟಿಣioಟಿ ಠಿoಟiಛಿಥಿ)ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನುಮುಂದೆ ವಾರ್ಷಿಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅದೇ ತರಗತಿಯಲ್ಲಿ ಮುಂದುವರಿಯುತ್ತಾರೆ.
2019ರಲ್ಲಿ ಶಿಕ್ಷಣದ ಹಕ್ಕು ಕಾಯಿದೆಗೆ (ಆರ್‌ಟಿಇ) ತಿದ್ದುಪಡಿ ತಂದ ಬಳಿಕ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 'ಅನುತ್ತೀರ್ಣ ರಹಿತ ನೀತಿ'ಯನ್ನು ಜಾರಿಗೆ ತಂದಿವೆ.
ಗೆಜೆಟ್ ಅಧಿಸೂಚನೆ ಪ್ರಕಾರ, ಅನುತ್ತೀರ್ಣವಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಲಹೆ, ಸೂಚನೆ ಜೊತೆಗೆ ಎರಡು ತಿಂಗಳ ಒಳಗಾಗಿ ಮರುಪರೀಕ್ಷೆ ನೀಡಲಾಗುತ್ತದೆ. ಆಗಲೂ ಅನುತ್ತೀರ್ಣವಾದರೆ, ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುತ್ತದೆ.
'ಅನುತ್ತೀರ್ಣಗೊಂಡ ವಿದ್ಯಾರ್ಥಿ ಮತ್ತು ಅಗತ್ಯಬಿದ್ದರೆ ಪೋಷಕರಿಗೆ ತರಗತಿ ಶಿಕ್ಷಕರು ಹೆಚ್ಚುವರಿ ಸಲಹೆ, ಸೂಚನೆಗಳನ್ನು ನೀಡಿ, ಕಲಿಯುವಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಯ ಏಳಿಗೆಗೆ ವಿಶೇಷ ಆಸಕ್ತಿ ತೋರಬೇಕು'ಎಂದು ತಿಳಿಸಲಾಗಿದೆ.
ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಹಿರಿಯ ಅಧಿಕಾರಿಗಳ ಪ್ರಕಾರ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಸೈನಿಕ ಶಾಲೆ ಸೇರಿದಂತೆ ಕೇಂದ್ರ ಸರ್ಕಾರ ನಡೆಸುತ್ತಿರುವ 3,000ಕ್ಕೂ ಅಧಿಕ ಶಾಲೆಗಳಿಗೆ ಈ ನಿಯಮ ಅನ್ವಯವಾಗಲಿದೆ.
ಶಾಲಾ ಶಿಕ್ಷಣವು ರಾಜ್ಯಗಳ ವ್ಯಾಪ್ತಿಗೆ ಬರುವುದರಿಂದ ಈ ಬಗ್ಗೆ ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಳ್ಳಬಹುದು. ಈಗಾಗಲೇ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈ ಎರಡು ತರಗತಿಗಳಿಗೆ ಅನುತ್ತೀರ್ಣ ರಹಿತ ನೀತಿಯನ್ನು ಜಾರಿಗೊಳಿಸಿವೆ.


