ಭಾವನಗರ: ಲೋಕೊ ಪೈಲಟ್‌ಗಳ ಸಮಯಪ್ರಜ್ಞೆಯಿಂದ ಕಳೆದೆರಡು ದಿನಗಳಲ್ಲಿ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ರೈಲು ಹಳಿ ದಾಟುತ್ತಿದ್ದ ಎಂಟು ಸಿಂಹಗಳ ಪ್ರಾಣ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಲೋಕೊ ಪೈಲಟ್‌ಗಳ ಎಚ್ಚರಿಕೆಯ ಚಾಲನೆ ಮತ್ತು ಅರಣ್ಯ ಇಲಾಖೆಯ ಟ್ರ್ಯಾಕರ್ಸ್‌ಗಳ ಸಹಾಯದಿಂದ ಈ ವರ್ಷ ಸುಮಾರು 104 ಸಿಂಹಗಳನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ ಎಂದು ಭಾವನಗರದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮಶೂಕ್ ಅಹ್ಮದ್ ಹೇಳಿದರು.
ಗುರುವಾರ ಹಪಾದಿಂದ ಪಿಪಾವಾವ್ ಬಂದರಿಗೆ ತೆರಳುತ್ತಿದ್ದ ಗೂಡ್ಸ್ ರೈಲನ್ನು ಚಲಾಯಿಸುತ್ತಿದ್ದ ಲೋಕೊ ಪೈಲಟ್ ಧವಲ್ಫಾಯಿ ಪಿ. ಅವರು ರಾಜುಲಾ ನಗರದ ಬಳಿ 5 ಸಿಂಹಗಳು ಹಳಿ ದಾಟುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿ, ಸಿಂಹಗಳು ಸುರಕ್ಷಿತವಾಗಿ ರೈಲು ಹಳಿಯನ್ನು ದಾಟುವಂತೆ ನೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಿಂಹಗಳ ಸುರಕ್ಷತೆಯನ್ನು ಖಚಿತಪಡಿಸಿದ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರವೂ ಇಂತಹದೇ ಪರಿಸ್ಥಿತಿ ಕಾಣಿಸಿಕೊಂಡಿದ್ದು, ಪ್ಯಾಸೆಂಜರ್ ರೈಲು ಚಲಾಯಿಸುತ್ತಿದ್ದ ಲೋಕೊ ಪೈಲಟ್ ಸುನೀಲ್ ಪಂಡಿತ್ ಅವರು, ಹೆಣ್ಣು ಸಿಂಹವೊಂದು ತನ್ನ ಎರಡು ಮರಿಗಳ ಜೊತೆ ರೈಲು ಹಳಿ ದಾಟಲು ಮುಂದಾಗುತ್ತಿದ್ದನ್ನು ಗಮನಿಸಿದ್ದಾರೆ. ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ.
ಉತ್ತರ ಗುಜರಾತ್‌ನಿಂದ ಪಿಪಾವಾವ್ ಬಂದರ್ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಏಷ್ಯಾಟಿಕ್ ಸಿಂಹಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಗುಜರಾತ್ ಹೈಕೋರ್ಟ್, ತೀವ್ರ ಕಳವಳ ವ್ಯಕ್ತಪಡಿಸಿತ್ತು. ಸಿಂಹಗಳ ಸಾವನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು.
ಇದಾದ ಬಳಿಕ ಸಿಂಹಗಳ ಸಾವನ್ನು ತಪ್ಪಿಸಲು ಈ ಮಾರ್ಗದಲ್ಲಿ ಹೆಚ್ಚಿನ ಜಾಗರೂಕತೆಯಿಂದ ರೈಲನ್ನು ಚಲಾಯಿಸುವಂತೆ ರೈಲ್ವೆ ಇಲಾಖೆಯ ಭಾವನಗರ ವಿಭಾಗ ಲೋಕೊ ಪೈಲಟ್‌ಗಳಿಗೆ ಸೂಚಿಸಿತ್ತು.






