ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧೆಡೆ ಪರೀಕ್ಷೆಗೆ ಒಳಪಟ್ಟ 90 ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಕ್ಟೋಬರ್‌ನಲ್ಲಿ ಕೇಂದ್ರದ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾದ 56 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ (ಎನ್‌ಎಸ್‌ಕ್ಯೂ) ಹೊಂದಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಪತ್ತೆ ಮಾಡಿದೆ.
ಇದಲ್ಲದೆ, ರಾಜ್ಯ ಔಷಧ ನಿಯಂತ್ರಕರು ಪರೀಕ್ಷಿಸಿದ 34 ಔಷಧಿ ಮಾದರಿಗಳು ಸಹ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ಗುರುತಿಸಲಾಗಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ ತಿಂಗಳಲ್ಲೇ ಬಿಹಾರ ಔಷಧ ನಿಯಂತ್ರಣ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಇನ್ನೂ ಮೂರು ಔಷಧ ನಕಲಿ ಎಂದು ಗುರುತಿಸಲಾಗಿದೆ. ಮತ್ತೊಂದು ಕಂಪನಿಯ ಬ್ರ್ಯಾಂಡ್ ಅನ್ನು ಬಳಸಿಕೊಂಡು ಅನಧಿಕೃತ ಉತ್ಪಾದಕರು ಈ ಔಷಧಗಳನ್ನು ತಯಾರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
'ಈ ಸಂಬಂಧ ತನಿಖೆಯನ್ನು ಆರಂಭಿಸಲಾಗಿದೆ'ಎಂದೂ ಅದು ತಿಳಿಸಿದೆ.
ರಾಜ್ಯಗಳ ಔಷಧ ನಿಯಂತ್ರಣ ಪ್ರಾಧಿಕಾರಗಳ ಜೊತೆ ನಕಲಿ ಮತ್ತು ಪ್ರಮಾಣಿತ ಗುಣಮಟ್ಟವಿಲ್ಲದ ಔಷಧಗಳ ಪತ್ತೆ ಮಾಡುವ ಕಾರ್ಯವನ್ನು ನಡೆಸಲಾಗಿದೆ. ನಕಲಿ ಔಷಧಗಳನ್ನು ಗುರುತಿಸಿ, ಮಾರುಕಟ್ಟೆಯಿಂದ ತೆಗೆಯಲೂ ಕ್ರಮ ಕೈಗೊಳ್ಳಲಾಗಿದೆ ಎಂದೂ ಅದು ತಿಳಿಸಿದೆ.
ಒಂದು ಅಥವಾ ಎರಡು ಗುಣಮಟ್ಟ ಮಾನದಂಡಗಳಲ್ಲಿ ವಿಫಲವಾದ ಆಧಾರದ ಮೇಲೆ ಔಷಧಿಯ ಗುಣಮಟ್ಟವನ್ನು ಅಳೆಯಲಾಗಿದೆ.

