ನವದೆಹಲಿ: 'ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದಾಗ, ಸಂಸತ್ತಿನ ಹೊಸ್ತಿಲಿಗೆ ನಮಸ್ಕರಿಸಿದ್ದರು. ಆಮೇಲೆ ನೂತನ ಸಂಸತ್ತಿನ ಕಟ್ಟಡಕ್ಕೆ ನಿರ್ಮಿಸಿದರು. ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಸಂವಿಧಾನಕ್ಕೆ ನಮಸ್ಕರಿಸಿದರು. ಅವರಿಗೆ ಈಗ ಹೊಸ ಸಂವಿಧಾನ ರಚಿಸುವ ಆಸೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಇಂಥ ಇಬ್ಬಗೆ ನೀತಿಗೆ ಮಿತಿಯೇ ಇಲ್ಲ' ಎಂದು ಕಾಂಗ್ರೆಸ್ ಮಂಗಳವಾರ ದೂರಿದೆ.
'ಮಸೀದಿ ಕೆಳಗೆ ದೇವಸ್ಥಾನ ಹುಡುಕುವುದನ್ನು ನಿಲ್ಲಿಸಿ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಕುರಿತು ಪತ್ರಿಕಾಗೋಷ್ಠಿಯೊಂದರಲ್ಲಿ ಕಾಂಗ್ರೆಸ್ ನಾಯಕರು ಪ್ರಕ್ರಿಯಿಸಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, 'ಯಾವಾಗೆಲ್ಲಾ ತಮ್ಮ ಮೃದು ಧೋರಣೆಯನ್ನು ಪ್ರದರ್ಶಿಸಬೇಕು ಎಂದು ಬಿಜೆಪಿ ನಿರ್ಧರಿಸುತ್ತದೆಯೊ, ಆಗ ಭಾಗವತ್ ಅವರನ್ನು ಮುಂದೆ ಮಾಡಿ ಅವರಿಂದ ಎಲ್ಲರಿಗೂ ಪ್ರಿಯವಾಗುವಂಥ ಹೇಳಿಕೆಗಳನ್ನು ಹೇಳಿಸುತ್ತದೆ. ನಂತರ ಇದಕ್ಕೆ ವಿರುದ್ಧವಾಗಿರುವ ಕೆಲಸವನ್ನೇ ಬಿಜೆಪಿ ಮಾಡುತ್ತದೆ' ಎಂದರು.
'ಎಲ್.ಕೆ. ಅಡ್ವಾಣಿ ಎದುರು ಮೋದಿ ಅವರು ಈ ಹಿಂದೆ ತಲೆಬಾಗುತ್ತಿದ್ದರು. ಈಗ ಅಡ್ವಾಣಿ ಅವರು ಆಸ್ಪತ್ರೆಯಲ್ಲಿದ್ದಾರೆ. ಆದರೆ, ಪ್ರತಾಪ್ ಸಾರಂಗಿ (ಸಂಸತ್ ಆವರಣದಲ್ಲಿ ನಡೆದ ತಳ್ಳಾಟದಲ್ಲಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಸೇರಿದ್ದ ಸಂಸದ) ಅವರನ್ನು ಮಾತ್ರ ನೋಡಲು ಬಿಜೆಪಿಯವರು ಆಸ್ಪತ್ರೆಗೆ ದೌಡಾಯಿಸಿದರು' ಎಂದು ಪಕ್ಷದ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವರ್ ಖೇರಾ ಹೇಳಿದರು.




